ಉಡುಪಿ, ಡಿ.03 (DaijiworldNews/MB) : ''ಡಿಸೆಂಬರ್ 5 ರಂದು ರಾಜ್ಯದಲ್ಲಿ ಯಾವುದೇ ಬಂದ್ ಇಲ್ಲ. ಬಂದ್ ಮಾಡಬಾರದು ಎಂದು ಸುಪ್ರೀಂಕೋರ್ಟ್ ಆದೇಶವಿದೆ'' ಎಂದು ಕರ್ನಾಟಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರು ಹೇಳಿದರು.




ಮರಾಠ ಅಭಿವೃದ್ದಿ ನಿಗಮಕ್ಕೆ ವಿರೋಧ ವ್ಯಕ್ತಪಡಿಸಿ ಡಿಸೆಂಬರ್ 5 ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ಬಗ್ಗೆ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಸರಕಾರದ ದೃಷ್ಟಿಯಿಂದ ರಾಜ್ಯದಲ್ಲಿ ಯಾವುದೇ ಬಂದ್ ಇಲ್ಲ. ಬಂದ್ ಮಾಡಬಾರದು ಎಂದು ಸುಪ್ರೀಂಕೋರ್ಟ್ ಆದೇಶವಿದೆ. ಬಂದ್ ಮಾಡಿದರೆ ಕೋರ್ಟ್ ಆದೇಶ ಉಲ್ಲಂಘನೆ ಆಗುತ್ತದೆ. ನಾನು ಹಾಗೂ ಮುಖ್ಯಮಂತ್ರಿ ಬಂದ್ಗೆ ಕರೆ ನೀಡಿರುವವರ ಬಳಿ ಬಂದ್ ಮಾಡಬಾರದು ಎಂದು ಮನವಿ ಮಾಡಿದ್ದೇವೆ'' ಎಂದು ಹೇಳಿದ್ದು ''ಬಂದ್ಗೆ ಸಂಘಟನೆಗಳು ಕರೆ ನೀಡುರುವ ದಿನ (ಡಿ.5) ರಂದು ಟೋಲ್ಗಳಲ್ಲಿ ಭದ್ರತೆ ನಿಯೋಜನೆ ಮಾಡುತ್ತೇವೆ'' ಎಂದು ತಿಳಿಸಿದ್ದಾರೆ.
''ಲವ್ ಜಿಹಾದ್ ಬಗ್ಗೆ ಅಲಹಾಬಾದ್ ಹೈಕೋರ್ಟ್ ಮತಾಂತರಕ್ಕೆ ಸುಲಭ ವಿಧಾನ ಎಂಬ ಆದೇಶ ನೀಡಿದೆ. ಕರ್ನಾಟಕ ಸರ್ಕಾರ ಲವ್ ಜಿಹಾದ್ ವಿರುದ್ದ ಕಾನೂನಿನ ರೂಪುರೇಷೆ ಹೇಗಿರಬೇಕು ಎಂಬ ಬಗ್ಗೆ ಚರ್ಚೆ ನಡೆಸಲಿದೆ. ನಾವು ಉತ್ತರ ಪ್ರದೇಶದ ಕಾನೂನಿನ ಪ್ರತಿ ಅಧ್ಯಯನ ಮಾಡುತ್ತೇವೆ. ಏನೇ ಆದರೂ ಕರ್ನಾಟಕ ಸರ್ಕಾರ ಲವ್ ಜಿಹಾದ್ ಕಾನೂನು ಜಾರಿ ಮಾಡಿಯೇ ಶುದ್ದ. ಇದಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೂಡಾ ಒಪ್ಪಿಗೆ ಸೂಚಿಸಿದ್ದಾರೆ'' ಎಂದು ಹೇಳಿದರು.
ಇನ್ನು ಲವ್ ಜಿಹಾದ್ ಕಾನೂನಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಆಕ್ಷೇಪ ವ್ಯಕ್ತಪಡಿಸಿದ್ದು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ''ಸಿದ್ದರಾಮಯ್ಯನವರು ಮೊಘಲರ ಕಾಲದಲ್ಲೂ ಅಂತರ್ ಧರ್ಮೀಯ ವಿವಾಹ ನಡೆಯುತ್ತದೆ ಎಂದು ಹೇಳಿದ್ದಾರೆ. ಪ್ರಾಯಶಃ ಅವರು ಮೊಘಲ್ ಯುಗದಲ್ಲಿ ಬದುಕುತ್ತಲಿರಬೇಕು'' ಎಂದು ಲೇವಡಿ ಮಾಡಿದರು.
ಹಾಗೆಯೇ ಮತ್ತೆ ನೈಟ್ ಕರ್ಫೂ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ''ಈ ಬಗ್ಗೆ ಯಾವುದೇ ಸಭೆ ನಡೆದಿಲ್ಲ. ಜನ ಸೇರಬಾರದು ಎಂಬುವುದು ನಮ್ಮ ಬಯಕೆ. ಕೆಲವೇ ದಿನಗಳಲ್ಲಿ ನಾವು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ದಣಿ ತಡೆಯಲು ಬೇಕಾದ ಕ್ರಮ ಕೈಗೊಳ್ಳುತ್ತೇವೆ. ಅಷ್ಟೇ ಅಲ್ಲದೇ ನೈಟ್ ಕರ್ಫೂ ಹೊರತಾಗಿ ಇತರ ಕ್ರಮಗಳ ಬಗ್ಗೆ ಕೂಡಾ ಚರ್ಚೆ ಮಾಡುತ್ತೇವೆ'' ಎಂದು ಮಾಹಿತಿ ನೀಡಿದರು.
ಇದೇ ವೇಳೆ ಕೆಜಿ ಹಳ್ಳಿ ಪ್ರಕರಣದಲ್ಲಿ ಕಾರ್ಪೋರೇಟರ್ ಜಾಕೀರ್ ಬಂಧನ ವಿಚಾರದಲ್ಲಿ ಮಾತನಾಡಿದ ಸಚಿವರು, ''ಗುರುವಾರ ಜಾಕೀರ್ ಬಂಧನವಾಗಿದೆ. ಇಂದು ರಜೆ ಇರುವುದರಿಂದ ನಾಳೆ ಕೋರ್ಟ್ಗೆ ಹಾಜರು ಪಡಿಸಿ ಪೋಲಿಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು'' ಎಂದು ತಿಳಿಸಿದರು.
''ಕೊರೊನಾ ನಿಯಂತ್ರಣ ಪ್ರಮಾಣದ ಮೇಲೆ ಶಾಲಾ ಆರಂಭದ ಕುರಿತು ನಿರ್ಧಾರವಾಗುತ್ತದೆ. ಶಿಕ್ಷಣ ಸಚಿವರು ಕಾಲಕಾಲಕ್ಕೆ ಪೋಷಕರು, ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಜೊತೆಗೆ ಚರ್ಚೆ ಮಾಡುತಿದ್ದಾರೆ. ಪರ ವಿರೋಧ ವಿಚಾರವಿದೆ'' ಎಂದು ಗೃಹ ಸಚಿವರು ಈ ಸಂದರ್ಭದಲ್ಲೇ ತಿಳಿಸಿದರು.
''ಸಚಿವ ಸಂಪುಟದ ಬಗ್ಗೆ ಮುಖ್ಯಮಂತ್ರಿ ಹೈಕಮಾಂಡ್ ಜೊತೆ ಸಂಪರ್ಕದಲ್ಲಿ ಇದ್ದಾರೆ. ಶೀಘ್ರದಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ'' ಎಂದು ಹೇಳಿದ ಅವರು, ಬಿ ಎಸ್ ಯಡಿಯೂರಪ್ಪ ಹಾಗೂ ಜೆಡಿಎಸ್ ನಾಯಕ ಕುಮಾರಸ್ವಾಮಿ ಭೇಟಿ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿ, ''ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಆಗಲ್ಲ. ವಿಶ್ವನಾಥ್ ಹೇಳಿರುವುದು ಅವರ ವೈಯಕ್ತಿಕ ವಿಚಾರ. ಬಿಜೆಪಿಯಲ್ಲಿ ಯಾವುದೇ ತಿಕ್ಕಾಟ, ಗೊಂದಲವಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ರಾಷ್ಟ್ರೀಯ ನಾಯಕರು ಮತ್ತು ಅಧ್ಯಕ್ಷರು ಆದೇಶ ನೀಡಿ ತೀರ್ಮಾನ ಮಾಡುತ್ತಾರೆ'' ಎಂದು ಸ್ಪಷ್ಟಪಡಿಸಿದ್ದಾರೆ.