ಮಂಗಳೂರು, ಡಿ.03 (DaijiworldNews/MB) : ರಾಜ್ಯದಲ್ಲೀಗ ಗೋ ಹತ್ಯಾ ನಿಷೇಧ ಕಾನೂನಿನ ಬಗ್ಗೆ ಭಾರಿ ಚರ್ಚೆ ನಡೆಯುತ್ತಲಿದೆ. ಬಿಜೆಪಿ ಸರ್ಕಾರವು ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲಾಗುವುದು ಎಂದು ಹೇಳುತ್ತಲ್ಲೇ ಇದ್ದು ಈವರೆಗೂ ಜಾರಿಗೆ ಬಂದಿಲ್ಲ. ಗೋ ಹತ್ಯಾ ನಿಷೇಧ ಕಾನೂನು ಜಾರಿಗೆ ತರಲಾಗುವುದು ಎಂದು ನಿರಂತರವಾಗಿ ಹೇಳುತ್ತಲ್ಲೇ ಇರುವ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಖಾದರ್, ''ಎಪಿಎಂಸಿ ಕಾನೂನು ರಾತ್ರಿ ಬೆಳಗಾಗುವುದರೊಳಗೆ ತಂದಿದ್ದೀರಿ. ನಿಮಗೆ ಎಲ್ಲಾ ಕಾನೂನನ್ನು ರಾತ್ರಿ ಬೆಳಗಾಗುವುದರೊಳಗೆ ಜಾರಿಗೆ ತರಲಾಗುತ್ತದೆ. ಆದರೆ ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ತಡವೇಕೆ'' ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ''ರಾಜ್ಯದಲ್ಲೀಗ ನಿಮ್ಮದೇ ಸರ್ಕಾರವಿದೆ. ಹಾಗಿರುವಾಗ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರುವ ಬಗ್ಗೆ ಎರಡು ತಿಂಗಳಿನಿಂದ ಬರೀ ಚರ್ಚೆ ಯಾಕೆ? ಈ ಬಗ್ಗೆ ಸಂಪುಟ ಪ್ರಸ್ತಾಪ ಮಾಡಿ, ಚರ್ಚಿಸುವ'' ಎಂದು ಬಿಜೆಪಿಗೆ ಸವಾಲೆಸೆದಿದ್ದಾರೆ.
''ಈ ಗ್ರಾಮ ಪಂಚಾಯತಿ ಚುನಾವಣೆ ಸಮೀಪವಾಗುತ್ತಿರುವ ನಿಟ್ಟಿನಲ್ಲಿ ಬಿಜೆಪಿಯು ಬರೀ ಭಾವಾನಾತ್ಮಕ ವಿಚಾರಗಳನ್ನು ತೆಗೆದುಕೊಂಡು ಬಂದು ಜನರನ್ನು ವಿಭಜಿಸಿ ಮತ ಪಡೆಯುವ ತಂತ್ರ ನಡೆಸುತ್ತಿದೆ. ಬದಲಾಗಿ ಅವರು ಈ ಕಾನೂನನ್ನು ಜಾರಿ ಮಾಡುವುದಿಲ್ಲ'' ಎಂದು ಹೇಳಿದ್ದಾರೆ.
''ಗೋ ಹತ್ಯೆ ನಿಷೇಧ ತರುತ್ತೇವೆ ಎಂದು ಹಲವು ವರ್ಷಗಳಿಂದ ಹೇಳಿಕೊಂಡೇ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಬಿಜೆಪಿ ಸರ್ಕಾರ ಬಂದ ಬಳಿಕ ಭಾರತದಿಂದಲ್ಲೇ ವಿದೇಶಗಳಿಗೆ ಹೆಚ್ಚು ಗೋ ಮಾಂಸ ರಫ್ತಾಗುತ್ತಿದೆ. ಆದರೆ ಅವರಿಗೆ ಕಾನೂನು ಜಾರಿಗೆ ತರಲು ಆಗಿದೆಯೇ? ಗೋ ಹತ್ಯೆ ತಡೆಯುವ ಕಾನೂನು ಇಂದಿರಾ ಗಾಂಧಿ ಆಡಳಿತದಲ್ಲಿ ತಂದಿರುವುದೇ ಹೊರತು ಬಿಜೆಪಿಯು ಒಂದೇ ಒಂದು ಕಾನೂನು ಜಾರಿಗೆ ತಂದಿಲ್ಲ'' ಎಂದಿದ್ದಾರೆ.
''ರಾಜ್ಯದಲ್ಲಿ ಇಷ್ಟು ವರ್ಷ ಬಿಜೆಪಿ ಸರ್ಕಾರವಿದೆ. ಈವರೆಗೆ ಅವರು ಯಾಕೆ ಈ ಕಾನೂನುಗಳ ಬಗ್ಗೆ ಮಾತನಾಡಿಲ್ಲ. ಬರೀ ಜನರಲ್ಲಿ ಗೊಂದಲ ಮೂಡಿಸಲು ಈ ವಿಚಾರಗಳನ್ನು ಮಾತನಾಡುತ್ತಾರೆ. ಬರೀ ಹೊರಗಡೆ ಈ ಕಾನೂನುಗಳ ಬಗ್ಗೆ ಮಾತನಾಡುವುದರ ಹೊರತಾಗಿ ಸಂಪುಟದಲ್ಲಿ ಈ ವಿಚಾರದ ತನ್ನಿ ನಾವು ಚರ್ಚೆ ನಡೆಸುತ್ತೇವೆ. ಅದರ ಬದಲಾಗಿ ಜನರ ನಡುವೆ ಈ ವಿಚಾರ ತಂದು ಗಲಭೆ ಎಬ್ಬಿಸುವುದೇಕೆ?'' ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.