ಮಂಗಳೂರು, ಜೂ 11: ಪದುವಾ ಬಳಿ ವಾಸವಿರುವ ಕುಟುಂಬದ 10ವರ್ಷದ ಬಾಲಕಿ ತನ್ನ ತಮ್ಮ 6 ವರ್ಷದ ಸಹೋದರನನ್ನು ಕಾರಿನಲ್ಲಿ ಬಂದ ತಂಡ ಅಪಹರಿಸಿದೆ ಎಂದು ಕಥೆ ಕಟ್ಟಿ ಹೆತ್ತವರು ಮತ್ತು ಪೊಲೀಸರಲ್ಲಿ ಗಾಬರಿ ಹುಟ್ಟಿಸಿದ ಕುತೂಹಲಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸೆಕ್ಯುರಿಟಿ ಗಾರ್ಡ್ ಹಾಗೂ ಅಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯ ಇಬ್ಬರು ಮಕ್ಕಳು ,ಶುಕ್ರವಾರ ಶಾಲೆಗೆ ಮಳೆ ಕಾರಣದಿಂದ ನೀಡಿದ ರಜೆ ಕಾರಣ ಮನೆಗೆ ವಾಪಾಸ್ಸಾಗಿದ್ದರು. ಮನೆಯಲ್ಲಿ ಯಾರು ಇಲ್ಲದ ಕಾರಣ ಸಹೋದರನನ್ನು ನೋಡಿಕೊಳ್ಳವಂತೆ ತನ್ನ 10 ವರ್ಷದ ಮಗಳಿಗೆ ತಿಳಿಸಿ ತಂದೆ ಕೆಲಸಕ್ಕೆ ತೆರಳಿದ್ದರು.
ಅಪಾರ್ಟ್ ಮೆಂಟ್ ನ ಕೆಳಗೆ ಆಡುತ್ತಿದ್ದಾಗ ತಮ್ಮ, ಅಕ್ಕನಿಗೆ ಗೊತ್ತಾಗದಂತೆ ಅಪಾರ್ಟ್ ಮೆಂಟ್ ನ ಇನ್ನೊಂದು ಬದಿಗೆ ಹೋಗಿದ್ದಾನೆ. ತಮ್ಮನಿಗಾಗಿ ಎಷ್ಟೇ ಹುಡುಕಾಡಿದರೂ ಆತನ ಸುಳಿವು ಸಿಗಲಿಲ್ಲ. ಅಷ್ಟರಲ್ಲಿ ಅದೇ ಅಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಮಗಳನ್ನು ತಾಯಿ ಬಂದು ತಮ್ಮ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಆಗ ಗಾಬರಿಗೊಂಡ ಬಾಲಕಿ ತಮ್ಮ ಕಿಡ್ನಾಪ್ ಆಗಿದ್ದಾಳೆ ಎಂದು ವಿವರಿಸಿದ್ದಾಳೆ.
ಕಾರಿನಲ್ಲಿ ಬಂದ ತಂಡವೊಂದು ಅಪಾರ್ಟ್ ಮೆಂಟ್ ಎದುರು ಬಂದು ನಮ್ಮಿಬ್ಬರನ್ನು ಅದರಲ್ಲಿ ತುಂಬಿಸಿ ಕಿಡ್ನಾಪ್ ಮಾಡಲು ಯತ್ನಿಸಿತು ಆದರೆ ಪದುವಾ ಶಾಲೆಯ ಬಳಿ ನಾನು ಬಾಗಿಲು ತೆಗೆದು ತಪ್ಪಿಸಿಕೊಂಡೆ. ಆದರೆ ತಮ್ಮನನ್ನು ಆ ಗ್ಯಾಂಗ್ ಕಾರಿನಲ್ಲಿ ಅಪಹರಿಸಿತು ಎಂದು ವಿವರಿಸಿದಳು. ತಕ್ಷಣ ಕದ್ರಿ ಠಾಣೆಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಪೊಲೀಸರಿಗೂ ಅದೇ ಕಥೆಯನ್ನು ಹೇಳಿದ್ದಾಳೆ. ಆದ್ರೆ ಆಕೆಯ ಬಟ್ಟೆಯಲ್ಲಿ, ಕೈ ಕಾಲಿನಲ್ಲಿ ಮಣ್ಣಿನ ಗುರುತು, ಗಾಯದ ಗುರುತು ಇಲ್ಲದಿರುವುದನ್ನು ಪೊಲೀಸರು ಗಮನಿಸಿದ್ದಾರೆ.
ಆದರೂ ಅಪಹರಣ ಪ್ರಕರಣ ಎಂದಾಗ ಪೊಲೀಸರು ತಡ ಮಾಡದೇ ತಕ್ಷಣ ಕಾರ್ಯಪ್ರವೃತ್ತರಾದರು. ಆದರೆ ಸ್ಥಳಿಯರನ್ನು , ಅಂಗಡಿಯವರನ್ನು ವಿಚಾರಿಸಿದಾಗ ಬಾಲಕಿಯು ವಿವರಿಸಿದ ಕಾರು , ಅಥವಾ ಬಾಲಕಿ ಚೀರಾಟ ಕೂಗಾಟ ಯಾರು ತಮ್ಮ ಗಮನಕ್ಕೆ ಬಂದಿಲ್ಲ ಎಂದರು. ಎಲ್ಲೋ ಎಡವಟ್ಟಿವಾಗಿದೆ ಎಂದು ಮತ್ತೆ ಹೆತ್ತವರನ್ನು , ಬಾಲಕಿಯರನ್ನು ಕೂಲಂಕುಷವಾಗಿ ವಿಚಾರಣೆ ನಡೆಸುತ್ತಿದ್ದಾಗ ಆಪಾರ್ಟ್ ಮೆಂಟ್ ನ ಇನ್ನೊಂದು ಭಾಗದಿಂದ ಸೋದರ ಬಂದು ಎದುರಿಗೆ ನಿಂತ.. ಆದಾಗ ಬಾಲಕಿಯ ಸುಳ್ಳಿನ ಕಥೆ ಗೆ ಪೇಚಿಗೆ ಸಿಲುಕುವ ಸರದಿ ಇದೀಗ ಪೊಲೀಸರದಾಗಿತ್ತು..