ಮಂಗಳೂರು, ಡಿ.03 (DaijiworldNews/MB) : ವಸತಿ ಯೋಜನೆಯಡಿ ಪೊಲೀಸರಿಗಾಗಿ ಪಣಂಬೂರಿನಲ್ಲಿ ನಿರ್ಮಿಸಲಾಗಿರುವ ಅಪಾರ್ಟ್ಮೆಂಟ್ಗಳನ್ನು ಗೃಹ ಸಚಿವ ಬಸವರಾಜು ಬೊಮ್ಮಾಯಿಯವರು ಉದ್ಘಾಟಿಸಿದರು. ಈ ಅಪಾರ್ಟ್ಮೆಂಟ್ಗಳು 21.63 ಕೋಟಿ ರೂ. ಯ ಪೊಲೀಸ್ ವಸತಿ ಯೋಜನೆಯಡಿ ಮಂಗಳೂರು ಉಪ ವಿಭಾಗದಲ್ಲಿ 112 ಪೊಲೀಸ್ ಸಿಬ್ಬಂದಿಗಳಿಗಾಗಿ ನಿರ್ಮಿಸಲಾಗಿದೆ.























ಸಭೆಯನ್ನುದ್ದೇಶಿಸಿ ಮಾತನಾಡಿದ ಗೃಹ ಸಚಿವ ಬಸವರಾಜು ಬೊಮ್ಮಾಯಿಯವರು, "ಹೊಸ ನಿವಾಸವನ್ನು ಪಡೆದ ಎಲ್ಲಾ 112 ಪೊಲೀಸ್ ಸಿಬ್ಬಂದಿಗಳನ್ನು ನಾನು ಅಭಿನಂದಿಸುತ್ತೇನೆ. ರಾಜ್ಯದಲ್ಲಿ, ಶೇಕಡ 51 ರಷ್ಟು ಪೊಲೀಸರಿಗೆ ಮನೆಗಳನ್ನು ಒದಗಿಸಲಾಗಿದೆ. ಶೇ.75 ರಷ್ಟು ಪೊಲೀಸರಿಗೆ ನಿವಾಸ ನಿರ್ಮಾಣ ಮಾಡಿಕೊಡುವುದು ನಮ್ಮ ಗುರಿ. ಪೊಲೀಸ್ ವಸತಿ ಯೋಜನೆ 2025 ಮಂಜೂರಾಗಿದೆ. ಮುಂದಿನ ಐದು ವರ್ಷಗಳಲ್ಲಿ, ನಾವು 11,000 ಮನೆಗಳನ್ನು ನಿರ್ಮಿಸುತ್ತೇವೆ. ಆ ಮೂಲಕ ಶೇ. 60 ರಷ್ಟು ಪೊಲೀಸ್ ಸಿಬ್ಬಂದಿಗಳಿಗೆ ನಿವಾಸವನ್ನು ಒದಗಿಸಲಾಗುತ್ತದೆ'' ಎಂದು ತಿಳಿಸಿದರು.
''ಭೂಮಿಯನ್ನು ಗುರುತಿಸಲು ನಾವು ಎಲ್ಲಾ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇವೆ. ಮೊದಲ ಹಂತದ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ನಾವು ಮನೆಗಳನ್ನು ನಿರ್ಮಿಸುತ್ತೇವೆ. ಪ್ರಸ್ತುತ 192 ಮನೆಗಳ ಬೇಡಿಕೆಯಿದ್ದು, ಪ್ರಸ್ತುತ ಮಂಜೂರಾಗಿರುವ ಭೂಮಿಯಲ್ಲಿ 72 ಮನೆಗಳನ್ನು ನಿರ್ಮಿಸಲಾಗುವುದು. ಬೇರೆ ಭೂಮಿ ಮಂಜೂರಾತಿ ಆದ ಬಳಿಕ ಉಳಿದ ಮನೆಗಳನ್ನು ನಿರ್ಮಿಸಲಾಗುವುದು'' ಎಂದು ಮಾಹಿತಿ ನೀಡಿದರು.
''ಮಂಗಳೂರು ಪೊಲೀಸರಿಗೆ ಕೇಂದ್ರ ಭಾಗ ಹಾಗೂ ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳಲ್ಲಿ ಕರಾವಳಿ ಪ್ರದೇಶವು ಮುಂಚೂಣಿಯಲ್ಲಿದೆ. ಇಲ್ಲಿ ಜನರು ಹೆಚ್ಚು ಉದ್ಯಮಶೀಲರಾಗಿದ್ದಾರೆ. ಮೂಲಸೌಕರ್ಯ, ನೇಮಕಾತಿ, ತರಬೇತಿ, ಕೆಎಸ್ಆರ್ಪಿ ಬೆಟಾಲಿಯನ್ ಅಭಿವೃದ್ದಿ ಸೇರಿದಂತೆ ಹಲವು ಅಭಿವೃದ್ಧಿಯ ಯೋಜನೆಯನ್ನು ನಾವು ರೂಪಿಸುತ್ತಿದ್ದೇವೆ. ಪಾಲಿಕೆ ಮಿತಿಯಲ್ಲಿರುವ ಪ್ರದೇಶಗಳಿಗೆ ಸಂಚಾರ ವ್ಯವಸ್ಥೆಯ ಯೋಜನೆಯ ಬಗ್ಗೆ ಚಿಂತನೆ ನಡೆಸಲಾಗುತ್ತಿದ್ದು ಅದ ಬಗ್ಗೆ ಇದನ್ನು ಬಜೆಟ್ನಲ್ಲಿ ಪರಿಗಣಿಸಲಾಗುವುದು'' ಎಂದು ತಿಳಿಸಿದರು.
"ಅಕ್ರಮ ಸಂಚಾರವನ್ನು ತಡೆಯಲು ಹೆಚ್ಚಿನ ವೇಗದ ದೋಣಿಗಳನ್ನು ಒದಗಿಸುವ ಮೂಲಕ ಕರಾವಳಿ ಪೊಲೀಸರನ್ನು ಬಲಪಡಿಸುವ ಅಗತ್ಯವಿದೆ. ಭಯೋತ್ಪಾದಕರು ಮತ್ತು ರಾಷ್ಟ್ರ ವಿರೋಧಿಗಳು ಗೋಡೆ ಬರಹಗಳನ್ನು ಬರೆಯಲು ಆರಂಭಿಸಿರುವ ಹಿನ್ನೆಲೆ ನಾವು ನೈಟ್ ಬೀಟ್ ವ್ಯವಸ್ಥೆಯನ್ನು ಸುಧಾರಿಸಬೇಕಾಗಿದೆ. ಕಾಶ್ಮೀರ, ಇರಾಕ್ ಮತ್ತು ಇರಾನ್ಗಳಲ್ಲಿ ಈ ರೀತಿ ಇದೆ'' ಎಂದು ಮಾಹಿತಿ ನೀಡಿದರು.
''ಡ್ರಗ್ಸ್ ನಿಯಂತ್ರಣ, ಸೈಬರ್ ಕ್ರೈಮ್, ಬ್ಯಾಂಕ್ ವಂಚನೆ ಮುಂತಾದ ಹಲವು ಸವಾಲುಗಳನ್ನು ಪೊಲೀಸರು ಎದುರಿಸಬೇಕಾಗಿದೆ. ಕಳೆದ ಹತ್ತು ತಿಂಗಳುಗಳಲ್ಲಿ ಮಾದಕ ದ್ರವ್ಯಗೆ ಸಂಬಂಧಿಸಿದ ಅಧಿಕ ಪ್ರಕರಣಗಳನ್ನು ನಾವು ನೋಡಿದ್ದೇವೆ. ಈ ನಿಟ್ಟಿನಲ್ಲಿ ನಾವು ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಚಳುವಳಿ ನಡೆಸಬೇಕಾಗಿದೆ'' ಎಂದು ಹೇಳಿದರು.
ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ವಿಕಾಸ್ ಮಾತನಾಡಿ, "ಪೊಲೀಸರಿಗೆ ವಸತಿ ಅಪಾರ್ಟ್ಮೆಂಟ್ ದೊರೆಯುವ ಅವಶ್ಯಕತೆಯಿದೆ. ನಮಗೆ 112 ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಅದರಲ್ಲಿ 112 ಪೊಲೀಸರಿಗೆ ಹಿರಿತನದ ಆಧಾರದ ಮೇಲೆ ಮನೆಗಳನ್ನು ನೀಡಲಾಗಿದೆ. ಡಿಜಿಪಿ ಮತ್ತು ಪೊಲೀಸ್ ವಸತಿ ನಿಗಮಕ್ಕೆ ಪೊಲೀಸರಿಗೆ ಮನೆಗಳ ಅವಶ್ಯಕತೆ ಇರುವ ಬಗ್ಗೆ ಮನವಿ ಸಲ್ಲಿಸಲಾಗಿದೆ. ಪೊಲೀಸ್ ವಸತಿ ಯೋಜನೆಯನ್ನು 2025 ರವರೆಗೆ ವಿಸ್ತರಿಸಲಾಗಿದ್ದು 200 ಮನೆಗಳ ಅವಶ್ಯಕತೆಯಿದೆ. ಆ ಪೈಕಿ 72 ಮನೆಗಳನ್ನು ಅನುಮೋದಿಸಲಾಗಿದೆ. ಮನೆಗಳ ನಿರ್ಮಾಣಕ್ಕೆ ಭೂಮಿಯ ಲಭ್ಯತೆಯ ಬಗ್ಗೆ ನಾವು ಪರಿಶೀಲಿಸುತ್ತೇವೆ" ಎಂದು ತಿಳಿಸಿದರು.
ಮಂಗಳೂರು ನಗರ ಸಂಚಾರ ಮತ್ತು ಅಪರಾಧ ವಿಭಾಗದ ಉಪಪೊಲೀಸ್ ಆಯುಕ್ತ ವಿನಯ್ ಗಾಂವ್ಕರ್ ಸಭೆಯನ್ನು ಸ್ವಾಗತಿಸಿದರು. ಡಿಸಿಪಿ ಹರಿರಾಮ್ ಧನ್ಯವಾದ ಸಲ್ಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಮಂಗಳೂರು ಉತ್ತರ ವಲಯ ಶಾಸಕ ಡಾ.ಭರತ್ ವೈ ಶೆಟ್ಟಿ ಮತ್ತು ಇತರರು ಉಪಸ್ಥಿತರಿದ್ದರು.
ಉಗ್ರರ ಪರ ಗೋಡೆ ಬರಹ ವಿಚಾರ
ಬಳಿಕ ಮಾಧ್ಯಮಕ್ಕೆ ಉಗ್ರರ ಪರ ಗೋಡೆ ಬರಹ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರು, "ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹದ ಹಿಂದಿರುವ ಅಪರಾಧಿಗಳನ್ನು ತಕ್ಷಣ ಬಂಧಿಸುವಂತೆ ನಾನು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದ್ದೇನೆ. ಅದರಂತೆ ಆಯುಕ್ತರು ಅಪರಾಧಿಗಳನ್ನು ಪತ್ತೆಹಚ್ಚಲು ತಂಡಗಳನ್ನು ರಚಿಸಿದ್ದಾರೆ. ಪತ್ತೆ ಕಾರ್ಯ ಸಾಕಷ್ಟು ಪ್ರಗತಿಯನ್ನು ಕಂಡಿದ್ದು ಶೀಘ್ರವೇ ಅಪರಾಧಿಗಳನ್ನು ಬಂಧಿಸಲಾಗುವುದು. ಇಂತಹ ಅಹಿತಕರ ಘಟನೆಗಳನ್ನು ನಿಯಂತ್ರಿಸಲು, ನೈಟ್ ಬೀಟ್ ಅನ್ನು ಸುಧಾರಿಸಲು ಮತ್ತು ಡಿಸಿಪಿಯಂತಹ ಹಿರಿಯ ಅಧಿಕಾರಿಗಳನ್ನು ರಾತ್ರಿಯ ಸಮಯದಲ್ಲಿ ವಿಶೇಷವಾಗಿ ವಾರಾಂತ್ಯದಲ್ಲಿ ನಿಯೋಜಿಸಲು ನಾವು ನಿರ್ಧರಿಸಿದ್ದೇವೆ'' ಎಂದು ತಿಳಿಸಿದರು.
ಈ ಸಂದರ್ಭದಲ್ಲೇ ಸಿಸಿಟಿವಿ ಕ್ಯಾಮೆರಾಗಳ ಕಾರ್ಯನಿರ್ವಹಿಸದಿರುವ ಬಗ್ಗೆ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಅವರು, "ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸದಿರುವುದು ನನ್ನ ಗಮನಕ್ಕೆ ಬಂದಿದೆ. ಇತರ ಪಾಲಿಕೆಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ, ನಾವು ಸಿಸಿಟಿವಿಗಳನ್ನು ಸ್ಥಾಪಿಸಿದ್ದೇವೆ. ಅದೇ ರೀತಿ ಮಂಗಳೂರು ಪಾಲಿಕೆಯ ಮಿತಿಯಲ್ಲಿ, 1,200 ಸಿಸಿಟಿವಿಗಳನ್ನು ಪ್ರಮುಖ ಮತ್ತು ನಿರ್ಣಾಯಕ ಸ್ಥಳಗಳಲ್ಲಿ ಸ್ಥಾಪಿಸಲಾಗುವುದು'' ಎಂದು ಮಾಹಿತಿ ನೀಡಿದ್ದಾರೆ.