ಕಾಸರಗೋಡು, ಡಿ.03 (DaijiworldNews/MB) : ''ಧಾರ್ಮಿಕತೆಯ ವಿಚಾರದಲ್ಲಿ ಮತದಾರರನ್ನು ವಿಭಜಿಸಲು ಯತ್ನಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು'' ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.

ಗುರುವಾರ ವೀಡಿಯೋ ಕಾನ್ ಫೆರೆನ್ಸ್ ಮೂಲಕ ನಡೆದ ಕಾಸರಗೋಡು ಜಿಲ್ಲಾ ಮಟ್ಟದ ಚುನಾವಣೆ ನೀತಿಸಂಹಿತೆ ಮೋನಿಟರಿಂಗ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
''ಈಸ್ಟ್ ಏಳೇರಿ ಗ್ರಾಮ ಪಂಚಾಯತ್ನ ವ್ಯಾಪ್ತಿಯಲ್ಲಿ ಈ ರೀತಿಯ ಯತ್ನವೊಂದು ನಡೆದಿದೆ. ಮತೀಯ ಭಾವನೆ ಕೆರಳಿಸುವ ರೀತಿಯ ಕರಪತ್ರ ಮುದ್ರಿಸಿ ಪ್ರಚಾರ ನಡೆಸಲಾಗುತ್ತಿದೆ ಎಂಬ ಆರೋಪಗಳಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಚಿತ್ತಾರಿಕಲ್ಲು ಕೊಟ್ಟಾರತ್ತಿಲ್ ನಿವಾಸಿಯೊಬ್ಬರು ಈ ಸಂಬಂಧ ದೂರು ಸಲ್ಲಿಸಿದ್ದಾರೆ'' ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಜೈಸನ್ ಮ್ಯಾಥ್ಯೂ, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್ ಮೊದಲಾದವರು ಉಪಸ್ಥಿತರಿದ್ದರು.