ಮಂಗಳೂರು, ಡಿ.03 (DaijiworldNews/MB) : ಕೊಂಕಣಿ ಭವನ ಸ್ಥಾಪಿಸಲು ಭೂಮಿ ಪಡೆಯಲು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಕರ್ನಾಟಕ ಸರ್ಕಾರವು ಐದು ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ. ವರ್ಷಗಳ ಪ್ರಯತ್ನದಿಂದ ಇದು ಫಲಿಸಿದೆ. ಅಂಬೇಡ್ಕರ್ ಭವನದ ಹಿಂದಿರುವ ಮೂಡಾ ಕಟ್ಟಡದ ಸಮೀಪವಿರುವ ಉರ್ವಾದ ದೇರೇಬೈಲ್ ಗ್ರಾಮದಲ್ಲಿ ಈಗಾಗಲೇ 30 ಸೆಂಟ್ಸ್ ಭೂಮಿಯನ್ನು ಅನುಮೋದಿಸಲಾಗಿದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜಗದೀಶ್ ಪೈ ಹೇಳಿದರು.

ಡಿಸೆಂಬರ್ 3 ರ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ''ಅಕಾಡೆಮಿಗೆ ಪೂರ್ಣ ಸಮಯದ ರಿಜಿಸ್ಟ್ರಾರ್ ನೇಮಕ ಮಾಡುವಂತೆ ಕಳೆದ ಮೂರು ವರ್ಷಗಳಿಂದ ಅಕಾಡೆಮಿಯು ಸರ್ಕಾರಕ್ಕೆ ಪದೇ ಪದೇ ಮನವಿ ಮಾಡುತ್ತಿತ್ತು. ಈಗ ಸರ್ಕಾರ ಆರ್ ಮನೋಹರ್ ಕಾಮತ್ ಮುಂಡ್ಕೂರ್ ಅವರನ್ನು ರಿಜಿಸ್ಟ್ರಾರ್ ಆಗಿ ನೇಮಿಸಿದೆ. ಅವರು ಡಿಸೆಂಬರ್ 1 ರಂದು ಅಧಿಕಾರ ವಹಿಸಿಕೊಂಡರು. ಅವರು ಮಂಗಳೂರಿನ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು'' ಎಂದು ತಿಳಿಸಿದರು.
ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮನೋಹರ್ ಕಾಮತ್ ಅವರು ಅಧಿಕಾರ ವಹಿಸಿಕೊಂಡರು. ಈವರೆಗೆ ಹೆಚ್ಚುವರಿ ರಿಜಿಸ್ಟ್ರಾರ್ ಆಗಿ ಕಾರ್ಯ ನಿರ್ವಹಿಸಿದ್ದ ಕುಮಾರ್ ಬಾಬು ಅವರಿಗೆ ಹೃತ್ಪೂರ್ವಕ ವಿದಾಯ ನೀಡಲಾಯಿತು. ಈ ಸಂದರ್ಭದಲ್ಲಿ ಅಕಾಡೆಮಿಯ ಸದಸ್ಯರಾದ ಸಾಣೂರು ನರಸಿಂಹ ಕಾಮತ್, ಅರುಣ್ ಜಿ ಶೆಟ್ ಮತ್ತು ಜೀವನ್ ಪಿಂಟೊ ಉಪಸ್ಥಿತರಿದ್ದರು.
''ಕೊರೊನಾ ಕಾರಣ, ಅಕಾಡೆಮಿಗೆ ಹಲವು ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಿಲ್ಲ. ಮಾಧ್ಯಮ ಮತ್ತು ಇತರ ಅಪ್ಲಿಕೇಶನ್ಗಳ ಮೂಲಕ ಅಕಾಡೆಮಿಯ ಕಾರ್ಯಕ್ರಮಗಳನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ'' ಎಂದು ತಿಳಿಸಿದರು.
''ಯೂತ್ ಆಫ್ ಜಿಎಸ್ಬಿ ಮಂಗಳೂರು ಅಪ್ಲಿಕೇಶನ್ನ ಮೂಲಕ ಕೊಂಕಣಿ ಜಾನಪದ ಕಾರ್ಯಾಗಾರಗಳು, ಕೊಂಕಣಿ ವಿದ್ವಾಂಸರ ಮಾಹಿತಿಗಳು ಲಭ್ಯವಾಗಲಿದೆ. ಕೊಂಕಣಿ ಮಾತನಾಡುವ ಜನರ ಸಂಸ್ಕೃತಿ, ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವೂ ಇದೆ. ಕೊಂಕಣಿ ಭಾಷೆಯನ್ನು ಕಲಿಯಲು ಆನ್ಲೈನ್ ಕಾರ್ಯಕ್ರಮವಿದೆ'' ಎಂದು ಮಾಹಿತಿ ನೀಡಿದರು.
"ಸಾಮಾಜಿಕ ಮಾಧ್ಯಮದಲ್ಲಿ, ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ಯುವ ಕವಿಗಳು ಕವಿಗೋಷ್ಟಿ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಾರೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ರಿಜಿಸ್ಟ್ರಾರ್ ಮನೋಹರ್ ಕಾಮತ್, ಸದಸ್ಯರಾದ ಸಾಣೂರು ನರಸಿಂಹ ಕಾಮತ್, ಅರುಣ್ ಜಿ ಶೆಟ್ ಮತ್ತು ಇತರರು ಉಪಸ್ಥಿತರಿದ್ದರು.