ಬೆಂಗಳೂರು, ಜೂ 11: ಉಡುಪಿಯ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಸಚಿವ ಸ್ಥಾನ ಎಂದು ಆಗ್ರಹಿಸಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಲಾಯಿತು. ಉಡುಪಿ,ಕುಂದಾಪುರದ ಕೆಲ ಪ್ರತಾಪ್ ಚಂದ್ರ ಶೆಟ್ಟಿ ಅವರ ಬೆಂಬಲಿಗರೊಂದಿಗೆ ಕರವೇ ಪ್ರವೀಣ್ ಶೆಟ್ಟಿ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಪರಮೇಶ್ವರ್ ಅವರಿಗೆ ಮನವಿ ಮಾಡಿದರು.
ಪ್ರತಿಭಟನೆಯ ಒಂದು ಹಂತದಲ್ಲಿ ಪ್ರತಾಪ್ ಚಂದ್ರ ಶೆಟ್ಟಿ ಬೆಂಬಲಿಗರ ತೀವ್ರ ವಾದದಿಂದ ಸಿಟ್ಟಿಗೆದ್ದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕಾಂಗ್ರೆಸ್ ನ ಹೆಮ್ಮರವನ್ನೇ ಕಡಿದು ಹಾಕಿ ಈ ಸಚಿವ ಸ್ಥಾನ ಕೇಳಲು ಬಂದಿದ್ದೀರಾ ಎಂದು ಪ್ರತಿಭಟನೆಕಾರರನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಪ್ರತಿಭಟನಾಕರರು ಸುಮ್ಮನಾಗದೇ ಈ ಹಿಂದಿನ ಚುನಾವಣೆಯಲ್ಲಿ ಮಂಗಳೂರಿನಲ್ಲಿ ಹತ್ತು ಶಾಸಕ ಸ್ಥಾನಗಳನ್ನು ಗೆಲ್ಲಿಸಿದ್ದೆವು. ಈ ಬಾರಿಯೂ ಹೋರಾಟ ಮಾಡಿದ್ದೀವಿ ಎಂದರು. ಅವರ ಮಾತಿಗೆ ತಿರುಗೇಟು ನೀಡಿದ ಪರಮೇಶ್ವರ್ , ಎಲ್ಲಿ ಹೋರಾಟ ಮಾಡಿದ್ದೀರಾ, ಎಲ್ಲಾ ಬೆಂಗಳೂರಿನಲ್ಲಿ ಇದ್ದುಕೊಂಡು ಏನೂ ಕೆಲಸ ಮಾಡಲಿಲ್ಲ. ಹಿಂದೆ ಗೆದ್ದಿದ್ದು ಹೇಳಬೇಡಿ ಈಗ ಏನಾಗಿದೆ ಎಂಬುವುದು ಹೇಳಿಹಾಗೆ ಹೇಳೋದಾದರೆ 2013 ರಲ್ಲಿ ಕಾಂಗ್ರೆಸ್ 121 ಸ್ಥಾನಗೆದ್ದಿತ್ತು. ಅದನ್ನು ಈಗ ಹೇಳಿ ಅಧಿಕಾರ ಪಡೆಯೋಕೆ ಆಗುತ್ತಾ ಎಂದರು.
ಆದರೂ ಸುಮ್ಮನಾಗದ ಪ್ರತಿಭಟನಕಾರರೂ, ಮೈಸೂರಿನಲ್ಲಿ ಕೂಡಾ ಕಾಂಗ್ರೆಸ್ ಸೋತಿದೆಯಲ್ಲಾ ಅಂದಗಾ ಅಲ್ಲಿಗೂ ಇಲ್ಲಿಗೂ ಹೋಲಿಕೆ ಬೇಡಾ ಎಂದರು. ಆಗ ಪ್ರತಿಭಟನಕಾರರಲ್ಲಿ ಒಬ್ಬ ಬೆಳವಣಿಗೆ ಆಗಬೇಕಾದರೆ ಪೋಷಕಾಂಶ ಹಾಕಬೇಕು ಹಾಗಾಗಿ ಜಿಲ್ಲೆಗೆ ಮಂತ್ರಿ ಸ್ಥಾನ ಕೊಡಿ , ಮುಂದೆ ಫಲ ಸಿಗುತ್ತೆ ಎಂದರು. ಆಗ ಪರಮೇಶ್ವರ್ ಮರ ಕಡಿದು ಬಿಟ್ಟು ಈಗ ಫಲ ಕೇಳಲು ಬಂದಿದ್ದೀರಾ ಎಂದಾಗ ಮತ್ತು ಸುಮ್ಮನಾಗದ ಬೆಂಬಲಿಗ ಕಾಂಗ್ರೆಸ್ ಸಾಗುವನಿ ಮರ . ಅದು ಕಡಿದರೆ ಮತ್ತೆ ಚಿಗುರುತ್ತೆ ಎಂದಾಗ ಗರಂ ಆಗಿದ್ದ ಪರಂ ನಕ್ಕು ಸುಮ್ಮನಾಗಿ ಎರಡನೇ ಹಂತದ ಸಂಪುಟ ವಿಸ್ತರಣೆಯ ವೇಳೆ ಸ್ಥಾನ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಉಡುಪಿ ಜಿಲ್ಲೆಯಲ್ಲಿ 5 ಕ್ಕೆ 5 ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದ ಹಿನ್ನಲೆಯಲ್ಲಿ ಏಕೈಕ ಪರಿಷತ್ ಸದಸ್ಯರಾಗಿದ್ದ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಜಿಲ್ಲಾವಾರು ಮತ್ತು ಜಾತಿವಾರು ಪ್ರಾತಿನಿಧ್ಯ ಸಿಗಬಹುದು ಎನ್ನಲಾಗಿತ್ತು.