ಉಡುಪಿ, ಡಿ.04 (DaijiworldNews/PY): "ಗೋವಾ ಪ್ರವಾಸೋದ್ಯಮದಲ್ಲಿ ಸಾಕಷ್ಟು ಅಭಿವೃದ್ಧಿ ಪಡೆದಿದೆ. ಆದರೆ ಅಲ್ಲಿಯ ಸಿಆರ್ಜಡ್ ನಿಯಮಕ್ಕೂ ಇಲ್ಲಿಗೂ ಬಹಳಷ್ಟು ವ್ಯತ್ಯಾಸವಿದೆ. ಅದೇ ರೀತಿ ಕರ್ನಾಟಕದಲ್ಲೂ ನಿಯಮ ಸಡಿಲೀಕರಣ ಕೊಳ್ಳಲಿದೆ.ಇದು ಎರಡು ಮೂರು ದಶಕಗಳ ಕನಸು. ಮೋದಿ ಪ್ರಧಾನಿ ಆದ ನಂತರ ಗೋವಾ ಮಾದರಿಯಲ್ಲಿ ಸಿಆರ್ಜಡ್ ಜಾರಿ ಗೊಳ್ಳುವಂತೆ ಕರಡು ಕೂಡ ಸಿದ್ದವಾಗಿದೆ. ಕೆಲವೇ ತಿಂಗಳಲ್ಲಿ ಅದು ಅನುಷ್ಠಾನವಾಗುವ ಭರವಸೆ ಇದೆ" ಎಂದು ಗೃಹ ಸಚಿವ ಬಸವರಾಜು ಬೊಮ್ಮಾಯಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
















ಗುರುವಾರ ಡಿಸೆಂಬರ್ 3 ರಂದು, 3 ಕೋಟಿ. ರೂ ವೆಚ್ಚದಲ್ಲಿ ಮಲ್ಪೆ ಕಡಲ ಕಿನಾರೆಯ ಸೀ ವಾಕ್ ಬಳಿ ನಿರ್ಮಿಸಲಾದ ಬಯಲು ರಂಗಮಂದಿರ ಹಾಗೂ ಉದ್ಯಾನವನವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಉಡುಪಿ - ಮಲ್ಪೆ ರಸ್ತೆ ಅಗಲೀಕರಿಸಲು ರೂ 91 ಕೋಟಿ ಅನುದಾನ ಬಿಡುಗಡೆಯಾಗಿದ್ದು ತಕ್ಷಣವೇ ಕಾಮಗಾರಿ ಆರಂಭಗೊಳ್ಳಲಿದೆ ಎಂದರು. ಮುಂದಿನ ಡಿಸೆಂಬರ್ ಒಳಗೆ ಕಾಮಗಾರಿ ಸಂಪೂರ್ಣ ವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಸಣ್ಣ ಸಣ್ಣ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಗೆ ಪ್ರಸ್ತಾವನೆ ಕಳುಹಿಸುವಂತೆ ಡಿಸಿಗೆ ಹೇಳಿದ್ದೇನೆ" ಎಂದರು.
"ಮಲ್ಪೆ-ಪಡುಕೆರೆ ಭಾಗದಲ್ಲಿ ಮರಿನಾ ನಿರ್ಮಾಣದ ಯೋಜನೆಯ ಡಿಪಿಆರ್ ತಯಾರಿಸಲು ರೂ. 1.00 ಕೋಟಿ ವೆಚ್ಚವಾಗಲಿದೆ. ತಕ್ಷಣದಲ್ಲಿ ಅನುದಾನ ಮಂಜೂರುಗೊಳಿಸಿ ಡಿ. ಪಿ. ಆರ್ ತಯಾರಿಸಲು ಸೂಚಿಸಿ ನಂತರ ಯೋಜನೆಯ ಅನುಷ್ಠಾನಕ್ಕೆ ಅನುದಾನಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ ಅವರು ಉಡುಪಿ ಜಿಲ್ಲೆಯಲ್ಲಿ ಸಮಗ್ರ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಉಡುಪಿಯ ಪ್ರವಾಸಿ ತಾಣಗಳನ್ನು, ಪುಣ್ಯ ಕ್ಷೇತ್ರಗಳನ್ನು ಸೇರಿಸಿ ಲೋಗೋ ಸಿದ್ಧಪಡಿಸಿ, ಟಾಸ್ಕ್ ಫೋರ್ಸ್ ಸಕ್ರಿಯಗೊಳಿಸಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯ ಕುರಿತು ದೂರದೃಷ್ಟಿಯ ಸಮಗ್ರ ವರದಿ ಸಿದ್ಧಪಡಿಸಿ" ಎಂದು ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.
"ಕರ್ನಾಟಕದಲ್ಲೇ ನಂಬರ್ 1 ಪ್ರವಾಸಿ ತಾಣ ಉಡುಪಿ ಆಗಬೇಕು. ಮಲ್ಪೆ ಒಂದು ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿ ಮಿಂಚಬೇಕು ಎನ್ನುವುದು ನನ್ನ ಆಸೆ. ಪ್ರವಾಸಿಗರು ಇನ್ನಷ್ಟು ಬರಬೇಕು. ಗೋಲ್ಡನ್ ಸ್ಯಾಂಡ್, ಬ್ಲೂ ಬೀಚ್ ಎರಡೂ ಇಲ್ಲಿವೆ. ಈ ಜಿಲ್ಲೆ ನಿಸರ್ಗದತ್ತ ಸಂಪನ್ಮೂಲ ಇದೆ. ಅದನ್ನು ಸದುಪಯೋಗ ಪಡಿದಿಕೊಳ್ಳಬೇಕು ಅಲ್ಲದೆ, ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು" ಎಂದರು.
"ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಶಿಕ್ಷಣ ಅಭಿವೃದ್ಧಿಯಲ್ಲಿ ಉಡುಪಿಗೆ ಒಳ್ಳೆಯ ಭವಿಷ್ಯವಿದೆ. ಉಡುಪಿಯಲ್ಲಿ ಇವೆರಡರ ಅಭಿವೃದ್ಧಿಗೆ ಬಹಳಷ್ಟು ಅವಕಾಶವಿದೆ. ಉಡುಪಿ ಜಿಲ್ಲೆ ಎಂದರೆ ಪ್ರತಿಯೊಬ್ಬ ನಾಗರೀಕ ಕೂಡ ಹೆಮ್ಮೆ ಪಡಬೇಕು. ಆ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕಿದೆ" ಎಂದರು.