ವಿಟ್ಲ, ಡಿ.04 (DaijiworldNews/PY): ವಿಟ್ಲದ ಸ್ವಯಂ ಘೋಷಿತ ಮುಖಂಡನೊಬ್ಬ ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ವಿಟ್ಲ ಕಲಾಶೀಪಾಳ್ಯದಲ್ಲಿ ನಡೆದಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಜಯ ಕೊಟ್ಟಾರಿ
ವಿಟ್ಲ ಪಡ್ನೂರು ಗ್ರಾಮದ ಕಡಂಬು ಸುರಂಗದಮೂಲೆ ನಿವಾಸಿ ಚಿದಾನಂದ ಹಲ್ಲೆಗೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಟ್ಲ ಕಸಬ ಗ್ರಾಮದ ಕಲಾಸಿ ಪಾಳ್ಯ ಎಂಬಲ್ಲಿ ಜಯ ಕೊಟ್ಟಾರಿ ಎಂಬಾತನು ಚಿದಾನಂದ ಎಂಬವರಿಗೆ ಅವಾಚ್ಯ ಶಬ್ದಗಳಿಂದ ಬೈದು, ದಾಳಿ ನಡೆಸಿದ್ದಾನೆ.
ಜಯ ಕೊಟ್ಟಾರಿ ಮತ್ತು ಚಿದಾನಂದ ಇಬ್ಬರು ಪರಿಚಯಸ್ಥರಾಗಿದ್ದು. ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಕಲಾಸಿ ಪಾಳ್ಯದಿಂದ ಕೆಲಸ ಮುಗಿಸಿ ಮನೆಗೆ ತೆರಳುವಾಗ ಏಕಾಏಕಿಯಾಗಿ ಜಯ ಕೊಟ್ಟಾರಿ, ಚಿದಾನಂದ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು, ದಾಳಿ ನಡೆಸಿದ್ದಾನೆ. ಕಬ್ಬಿಣದ ಪೈಪಿನಿಂದ ಚಿದಾನಂದ ಅವರ ಹೊಟ್ಟೆಯ ಎಡಭಾಗಕ್ಕೆ ಹೊಡೆದ ಕಾರಣ ಗಾಯವಾಗಿದೆ. ಆ ಸಂದರ್ಭದಲ್ಲಿ ಚಿದಾನಂದ ಜೋರಾಗಿ ಬೊಬ್ಬೆ ಹಾಕಿದಾಗ ನಿನ್ನನ್ನು ಜೀವ ಸಹಿತ ಬಿಡಲಾರೆ ಎಂದು ಬೆದರಿಕೆ ಹಾಕಿ ಜಯ ಕೊಟ್ಟಾರಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಹಲ್ಲೆಯಿಂದ ಗಾಯಗೊಂಡ ಚಿದಾನಂದ ಅವರನ್ನು ವಿಟ್ಲದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆರೋಪಿಯ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.