ಬೆಂಗಳೂರು, ಜೂ 11 : ಉನ್ನತ ಶಿಕ್ಷಣ ಖಾತೆ ತಮಗೆ ಬೇಡ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಜಿಟಿ ದೇವೇಗೌಡರ ಖಾತೆ ಬದಲಾವಣೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಧನಾತ್ಮಕವಾಗಿ ಸ್ಪಂದಿಸಿದ್ದಾರೆ.
ತಾನು ಓದಿದ್ದು 8ನೇ ತರಗತಿ ಹೀಗಾಗಿ ತನಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ಬೇಡ . ಸಹಕಾರ ಅಥವಾ ಅಬಕಾರಿ ಖಾತೆ ಕೊಡಿ ಎಂದು ಜಿಟಿಡಿ ಸಿಎಂ ಬಳಿ ಮನವಿ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಜೂನ್ 8 ರಂದು ಖಾತೆ ಹಂಚಿಕೆ ಸಂದರ್ಭದಲ್ಲಿ ಜಿಟಿ ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ ನೀಡಲಾಗಿತ್ತು. ಚುನಾವಣೆಗೂ ಹಿಂದೆಯೇ ಜೆಡಿಎಸ್ ಪಕ್ಷಕ್ಕೆ ಅಧಿಕಾರ ನಡೆಸಲು ದೊರಕಿದರೆ ಜಿಟಿಡಿ ಅವರಿಗೆ ಮಂತ್ರಿಸ್ಥಾನ ಗ್ಯಾರಂಟಿ ಎನ್ನಲಾಗಿತ್ತು. ಅದರಲ್ಲೂ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಪರ್ಧಿಸಿ ಗೆದ್ದ ಮೇಲೆ ಅವರ ವರ್ಚಸ್ಸು ಹೆಚ್ಚಿದೆ. ಆ ಕಾರಣದಿಂದ ಅವರಿಗೆ ಮಂತ್ರಿಸ್ಥಾನವನ್ನು ನೀಡಲೇಬೇಕಾದ ಋಣದಲ್ಲಿ ಎಚ್ ಡಿ ಕುಮಾರಸ್ವಾಮಿ ಇದ್ದರು.
ಆದರೆ ಜಿಟಿ ದೇವೇಗೌಡರಿಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ, ಆಕ್ರೋಶ ವ್ಯಕ್ತಪಡಿಸಿದ್ದರು. ಕಡಿಮೆ ಕಲಿತಿದ್ದರೂ, ಉನ್ನತ ಶಿಕ್ಷಣ ಸಚಿವ ಸ್ಥಾನ ಎಂದು ವ್ಯಂಗ್ಯವಾಡಿದ್ದರು. ಇದರಿಂದಾಗಿ ಮುಜುಗರಕ್ಕೆ ಒಳಗಾದ ದೇವೇಗೌಡರು ಖಾತೆಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಿಲ್ಲ, ಬೇರೆ ಖಾತೆ ನೀಡಿ ಎಂದು ಸಿಎಂ ಬಳಿ ಮನವಿ ಮಾಡಿಕೊಂಡಿದ್ದಾಗಿ ವರದಿಯಾಗಿದೆ.