ಮಂಗಳೂರು, ಜೂ 11: ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮತ್ತು ಭುವನೇಂದ್ರ ಸ್ವಾಮಿ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಬ್ಯಾಂಕ್ ಜಂಟಿಯಾಗಿ ಮಂಗಳೂರು ನಗರ ದಕ್ಷಿಣದ ನೂತನ ಶಾಸಕರನ್ನು ವಿಶೇಷ ರೀತಿಯಲ್ಲಿ ಸನ್ಮಾನಿಸುವ ಮೂಲಕ ಮಾದರಿಯಾಗಿದ್ದಾರೆ. ಜೂ 11 ರ ಸೋಮವಾರ ನಗರದ ವಿಠೋಭ ದೇವಸ್ಥಾನ ರಸ್ತೆಯಲ್ಲಿರುವ ಚೇತನಾ ವಿಶೇಷ ಮಕ್ಕಳ ಶಾಲೆಯಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಮೂಲಕ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಮಾಜಕ್ಕೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ.
ಸನ್ಮಾನ ಕಾರ್ಯಕ್ರಮ ಎಂದರೆ ಅಲ್ಲಿ ಹಾರ ತುರಾಯಿಗಳಿರಲೇಬೇಕು. ಇದರ ಅಬ್ಬರದಲ್ಲಿಯೇ ಸನ್ಮಾನ ಕಾರ್ಯಕ್ರಮ ಕಳೆದು ಹೋಗಿ ಸಾರ್ಥಕತೆಯನ್ನು ಪಡೆಯುವುದು ಕಡಿಮೆ. ಆದರೆ ಇಂದು ಇಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಆತ್ಮತೃಪ್ತಿ ಯೊಂದಿಗೆ ಸಾರ್ಥಕತೆಯ ಛಾಯೆ ಇತ್ತು. ಕಾರಣ ಇದು ಕೇವಲ ಸನ್ಮಾನ ಕಾರ್ಯಕ್ರಮವಾಗಿರಲಿಲ್ಲ. ಚೇತನಾ ಶಾಲೆಯ ಮಕ್ಕಳಲ್ಲಿ ಖುಷಿಯನ್ನು ಕಾಣುವ ಗುರಿ ಇತ್ತು. ಅಲ್ಲಿನ ಹಿರಿಯರ ಮುಖದಲ್ಲಿ ನಗು ತರುವ ಪ್ರಯತ್ನ ಇತ್ತು. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮತ್ತು ಭುವನೇಂದ್ರ ಸ್ವಾಮಿ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಬ್ಯಾಂಕ್ ಪದಾಧಿಕಾರಿಗಳು ಮತ್ತು ಸಹೃದಯಿಗಳು ಚೇತನಾ ಶಾಲೆಗೆ ಆರ್ಥಿಕ ನೆರವು ನೀಡುವ ಚಿಂತನೆಯನ್ನು ಶಾಸಕ ಡಿ ವೇದವ್ಯಾಸ ಕಾಮತ್ ಅವರ ಕೈಯಲ್ಲಿ ಶಾಲೆಗೆ ಚೆಕ್ ಹಸ್ತಾಂತರಿಸುವ ಈಡೇರಿಸಿದರು. ಆ ಆರ್ಥಿಕ ನೆರವನ್ನು ಚೇತನಾ ಶಾಲೆ ತನ್ನ ಮಕ್ಕಳ ಅಗತ್ಯಕ್ಕಾಗಿ ಭವಿಷ್ಯದಲ್ಲಿ ಬಳಸುವಾಗ ಸನ್ಮಾನ ಕಾರ್ಯಕ್ರಮಕ್ಕೂ ಅರ್ಥ ಬರಲಿದೆ.