ವಿಟ್ಲ, ಡಿ. 04 (DaijiworldNews/SM): ವಿಟ್ಲ ಪರಿಸರದಲ್ಲಿ ಹುಚ್ಚು ನಾಯಿಯೊಂದು ಮಕ್ಕಳು ಸಹಿತ ಏಳು ಮಂದಿಗೆ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ. ಪರಿಸರದಲ್ಲಿ ಹುಚ್ಚುನಾಯಿ ಓಡಾಟದಿಂದಾಗಿ ಜನರಲ್ಲಿ ಇದೀಗ ಆತಂಕ ಶುರುವಾಗಿದೆ.

ಚಂದಳಿಕೆ ನಿವಾಸಿ ಅಹರಾಜ್(6), ಬೊಬ್ಬೆಕೇರಿ ನಿವಾಸಿ ಮೌಸೀಫ್(16), ಇರಾ ನಿವಾಸಿ ಮುಸ್ತಫಾ(31), ವಿಟ್ಲ ಕಸಬಾ ನಿವಾಸಿ ಅನಿರುದ್ಧು(27), ಕಡಂಬು ನಿವಾಸಿ ರಾಧಾಕೃಷ್ಣ(52), ಅಳಿಕೆ ನಿವಾಸಿ ಭಾಸ್ಕರ್(49) ಎಂಬವರು ನಾಯಿ ಕಡಿತದಿಂದ ಗಾಯಗೊಂಡು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಆರು ಮಂದಿಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು, ಅವರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಸಣ್ಣಮಟ್ಟದ ಗಾಯಗೊಂಡವರು ವಿಟ್ಲದಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ವಿಟ್ಲ ದೇವಸ್ಥಾನ ರಸ್ತೆಯಿಂದ ಬೊಬ್ಬೆಕೇರಿ ಮೂಲಕ ಬಂದ ಹುಚ್ಚು ನಾಯಿ ಪೇಟೆವರೆಗೆ ಓಡಾಡಿ ದಾರಿಯಲ್ಲಿ ಸಿಕ್ಕಿದವರಿಗೆಲ್ಲ ಕಚ್ಚಿ ಗಾಯಗೊಳಿಸಿದೆ. ತಕ್ಷಣವೇ ಕಾರ್ಯಾಚರಣೆಗೆ ಇಳಿದ ಫ್ರೆಂಡ್ಸ್ ವಿಟ್ಲ ತಂಡದ ಮುರಳೀಧರ ಅವರ ತಂಡ ಹುಚ್ಚು ನಾಯಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಅನೇಕ ಬೀದಿ ನಾಯಿಗಳಿಗೆ ಇದು ಕಚ್ಚಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.