ಮಂಗಳೂರು, ಡಿ.05 (DaijiworldNews/PY): ಕೂಳೂರು ರಸ್ತೆಯಲ್ಲಿ ಬೈಕ್ ಅಪಘಾತಕ್ಕೀಡಾಗಿ ಓರ್ವ ಯುವಕ ರಸ್ತೆಗೆ ಬಿದ್ದಿರುವ ಯುವಕನ್ನು ಮೇಲಕ್ಕೆತ್ತುವ ಬದಲು ಅಲ್ಲಿ ಸೇರಿದ್ದ ಜನರು ಆತನ ಫೋಟೋ ವಿಡಿಯೋ ತೆಗೆಯುವುದರಲ್ಲಿ ತಲ್ಲೀನರಾಗಿದ್ದು, ಈ ವೇಳೆ ಜಯಪ್ರಕಾಶ್ ಆಳ್ವಾ ಎಂಬವರು ಬಂದು ಯುವಕನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಆಟೋ ರಿಕ್ಷಾದ ವ್ಯವಸ್ಥೆ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ
ಕೂಳೂರು ಸೇತುವೆಯಲ್ಲಿ ಬೈಕ್ ಸವಾರನಿಗೆ ಬಸ್ ಒಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಸ್ತೆಗೆ ಬಿದ್ದಿದ್ದಾನೆ. ಆದರೆ, ಅಲ್ಲಿ ಸೇರಿದ್ದ ಜನರು ಆತನನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗಿಲ್ಲ. ಬದಲಾಗಿ ಆತನ ಫೋಟೋ, ವಿಡಿಯೋ ತೆಗೆಯೋದರಲ್ಲಿ ಜನರು ಬ್ಯುಸಿಯಾಗಿದ್ದರು.
ಈ ಬಗ್ಗೆ ದಾಯ್ಜಿವಲ್ಡ್ ಜೊತೆ ಮಾತನಾಡಿದ ಜಯಪ್ರಕಾಶ್ ಆಳ್ವಾ ಅವರು, "ಅಪಘಾತ ಸಂಭವಿಸಿ ತೀವ್ರವಾಗಿ ಗಾಯಗೊಂಡ ಯುವಕ ರಸ್ತೆಯಲ್ಲಿ ಬಿದ್ದಿದ್ದಾನೆ. ಆದರೆ, ಅಲ್ಲಿ ಸೇರಿರುವ ಜನರು ಫೋಟೋ ತೆಗೆಯುತ್ತಿದ್ದಾರೆಯೇ ವಿನಃ ಆ ಯುವಕನನ್ನು ಆಸ್ಪತ್ರೆಗೆ ದಾಖಲಿಸಲು ಯಾರೂ ಮುಂದಾಗಿಲ್ಲ. ಕೊನೆಗೆ ನಾನೇ ಆಟೋ ರಿಕ್ಷಾವನ್ನು ನಿಲ್ಲಿಸಿ ಯುವಕನನ್ನು ಆಸ್ಪತ್ರೆಗೆ ಸ್ಥಳಾಂತರಿಸಿದೆ" ಎಂದು ಹೇಳಿದರು.
"ಸ್ಥಳದಲ್ಲೇ ಇದ್ದ ಟ್ರಾಫಿಕ್ ಪೊಲೀಸ್ ಕೂಡಾ ಆ ಯುವಕನನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡುವಲ್ಲಿ ವಿಫಲರಾಗಿದ್ದಾರೆ. ಟ್ರಾಫಿಕ್ ಪೊಲೀಸ್ ಬಳಿ ಕೇಳಿದಾಗ ಅವರು, ನನ್ನ ಕರ್ತವ್ಯದ ಸಮಯ ಮುಗಿದಿದೆ ಎನ್ನುವ ಉಡಾಫೆಯ ಉತ್ತರ ನೀಡಿದ್ದಾರೆ" ಎಂದು ಜಯಪ್ರಕಾಶ್ ಹೇಳಿದ್ದಾರೆ.
"ಬೇಸರದ ಸಂಗತಿಯೆಂದರೆ, ಆತನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತ್ತಾದರೂ ಆತ ಬದುಕುಳಿಯಲಿಲ್ಲ. ಜನರು ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಲ್ಲಿ, ಆತನ ಜೀವ ಉಳಿಸಬಹುದಾಗಿತ್ತು. ಖಾಸಗಿ ಬಸ್ನ ಅತಿಯಾದ ವೇಗ ಈ ಅಪಘಾತಕ್ಕೆ ಕಾರಣ" ಎಂದು ಹೇಳಿದರು.
ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಯುವಕ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಬಸ್ ಚಾಲಕ ಹಾಗೂ ನಿರ್ವಾಹಕ ಇಬ್ಬರೂ ಕೂಡಾ ಸ್ಥಳದಿಂದ ಪರಾರಿಯಾಗಿದ್ದಾರೆ.
ಸುತ್ತಮುತ್ತಲ ಪ್ರದೇಶದಲ್ಲಿ ಪೊಲೀಸರು ಇದ್ದರೂ ಕೂಡಾ ಅಪಘಾತಕ್ಕೊಳಗಾದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲು ವಿಫಲರಾಗಿದ್ದಾರೆ ಎನ್ನಲಾಗಿದೆ.