ಮಂಗಳೂರು, ಡಿ.05 (DaijiworldNews/MB) : ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಾಲೇಜುಗಳು ತೆರೆದು ಎರಡು ವಾರಗಳಾಗಿದೆ. ಆದರೆ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಯಾವುದೇ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ.

ಕೊರೊನಾ ಪರೀಕ್ಷೆ, ಕಡ್ಡಾಯ ಕೊರೊನಾ ನೆಗೆಟಿವ್ ವರದಿ, ಆನ್ಲೈನ್ ತರಗತಿಗಳ ಲಭ್ಯತೆ, ಪೋಷಕರಿಂದ ಅನುಮತಿ ಪತ್ರ ಪಡೆಯುವುದು ಇತ್ಯಾದಿ ವಿದ್ಯಾರ್ಥಿಗಳನ್ನು ಕಾಲೇಜುಗಳಿಂದ ದೂರವಿಟ್ಟಂತೆ ತೋರುತ್ತಿದೆ. ಕೇವಲ ಶೇ. 20 ರಷ್ಟು ವಿದ್ಯಾರ್ಥಿಗಳು ಮಾತ್ರ ತರಗತಿಗಳಿಗೆ ಹಾಜರಾಗುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. ಇನ್ನು ಕೆಲವು ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವಂತೆ ಒತ್ತಡ ಹೇರುತ್ತಿದೆ ಮಾಹಿತಿ ಇದೆ.
ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಬರುವ ಮೂರು ಜಿಲ್ಲೆಗಳ ಪೈಕಿ ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಸರಾಸರಿ ಹಾಜರಾತಿ ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.
ಕೆಲವು ಕಾಲೇಜುಗಳು ಆಫ್ಲೈನ್ ತರಗತಿಗಳನ್ನು ರೆಕಾರ್ಡ್ ಮಾಡುತ್ತಿದ್ದು ವಿದ್ಯಾರ್ಥಿಗಳಿಗೆ ಕಳುಹಿಸುತ್ತಿದೆ. ಇತರ ಕೆಲವು ಕಾಲೇಜುಗಳಲ್ಲಿ, ತರಗತಿಗಳನ್ನು ಆನ್ಲೈನ್ನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇಲ್ಲಿನ ವಿಶ್ವವಿದ್ಯಾಲಯ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ವಿದ್ಯಾರ್ಥಿಗಳಿಗೆ ತಮ್ಮ ಲೈವ್ ಯೂಟ್ಯೂಬ್ ಚಾನೆಲ್ನಲ್ಲಿ ತರಗತಿಗೆ ಹಾಜರಾಗಲು ಅವಕಾಶ ನೀಡುತ್ತಿದೆ. ತರಗತಿಗಳಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯವು ನಾಲ್ಕರಿಂದ ಐದು ಇದ್ದರೂ ಕೂಡಾ ತರಗತಿಗಳು ನಡೆಯುತ್ತಲೇ ಇದೆ.
ಕೆಲವು ಷರತ್ತುಗಳನ್ನು ಬದಲಾಯಿಸುವ ಮೂಲಕ ಕಾಲೇಜುಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಬೇಕು ಎಂದು ಇಲ್ಲಿನ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕೆಲವು ವಿದ್ಯಾರ್ಥಿಗಳು ಮನೆಯಲ್ಲಿ ಕಾಲೇಜಿಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಡುತ್ತಾರೆ. ಆದರೆ ಕಾಲೇಜಿನಲ್ಲಿ ಆನ್ಲೈನ್ ತರಗತಿಗಳನ್ನು ಹಾಜರಾಗುವುದಾಗಿ ತಿಳಿಸುತ್ತಾರೆ ಎಂಬ ಆರೋಪವು ಇದೆ. ವಿದ್ಯಾರ್ಥಿಗಳು ಈ ಆಯ್ಕೆಯ ಸ್ವಾತಂತ್ಯ್ರವನ್ನೇ ದುರುಪಯೋಗ ಪಡಿಸಿಕೊಂಡು ಬೀಚ್, ಮಾಲ್ಗಳಲ್ಲಿ ತಿರುಗುತ್ತಿದ್ದಾರೆ ಎಂಬ ಮಾಹಿತಿ ಕೂಡಾ ತಿಳಿದು ಬಂದಿದೆ.
ಇತ್ತೀಚಿಗೆ ನಡೆದ ಘಟನೆಯೊಂದರಲ್ಲಿ ಪೊಲೀಸರು ವಿದ್ಯಾರ್ಥಿಗಳನ್ನು ಬೀಚ್ನಿಂದ ಮನೆಗೆ ತೆರಳುವಂತೆ ಕಳುಹಿಸಿದ್ದರು.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಾಂಶುಪಾಲರೋರ್ವರು, ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವ ವಿಚಾರದಲ್ಲಿ ಅವರು ಕೊರೊನಾ ಸೋಂಕಿನ ಆತಂಕ ವ್ಯಕ್ತಪಡಿಸುತ್ತಾರೆ. ಹೋಟೆಲ್ಗಳು ಮತ್ತು ಇತರ ಪ್ರದೇಶಗಳಲ್ಲಿ ಸುತ್ತಾಡುತ್ತಾರೆ ಎಂದು ಹೇಳಿದ್ದಾರೆ.
ಈ ಮಧ್ಯೆ, ಕಾಸರಗೋಡು, ಕುಂಬ್ಳೆ ಮತ್ತು ಮಂಜೇಶ್ವರ ವಿದ್ಯಾರ್ಥಿಗಳು ಹೆಚ್ಚಿನ ಟಿಕೆಟ್ ಶುಲ್ಕ, ಬಸ್ ಪಾಸ್ಗಳು ದೊರೆಯದ ಕಾರಣ ಆನ್ಲೈನ್ ತರಗತಿಗಳಿಗೆ ಜೋತು ಬಿದ್ದಿದ್ದಾರೆ. ಈ ಹಿಂದೆ, ಈ ವಿದ್ಯಾರ್ಥಿಗಳಲ್ಲಿ ಅನೇಕರು ರೈಲು ಸಂಚಾರದ ಮೂಲಕ ನಗರಕ್ಕೆ ಬರುತ್ತಿದ್ದರು.
''ಡಿಸೆಂಬರ್ 2 ರಂದು ದಕ್ಷಿಣ ಕನ್ನಡ ಜಿಲ್ಲೆಯ 13,771 ಕಾಲೇಜು ವಿದ್ಯಾರ್ಥಿಗಳಲ್ಲಿ 2,464 ಮಂದಿ ಕಾಲೇಜುಗಳಿಗೆ ಹಾಜರಾಗಿದ್ದರು. ಉಡುಪಿಯಲ್ಲಿ 6,413 ವಿದ್ಯಾರ್ಥಿಗಳಲ್ಲಿ 1,929 ಮತ್ತು ಕೊಡಗಿನ 965 ಕಾಲೇಜು ವಿದ್ಯಾರ್ಥಿಗಳಲ್ಲಿ 406 ತರಗತಿಗಳಿಗೆ ಹಾಜರಾಗಿದ್ದರು. ವಿದ್ಯಾರ್ಥಿಗಳಿಗೆ ಆನ್ಲೈನ್ನಲ್ಲಿ ಕಲಿಯಲು ಅವಕಾಶವಿದೆ. ಅವರು ತರಗತಿಗಳಿಗೆ ಹಾಜರಾಗದಿದ್ದರೂ ಹಾಜರಾತಿ ಸಮಸ್ಯೆಯನ್ನು ಎದುರಿಸುವುದಿಲ್ಲ'' ಎಂದು ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಹೇಳಿದ್ದಾರೆ.
''ಕೆಲವು ವಿದ್ಯಾರ್ಥಿಗಳು ತಮ್ಮ ಅನುಮಾನಗಳನ್ನು ಸ್ಪಷ್ಟಪಡಿಸಲು ಮಾತ್ರ ಕಾಲೇಜುಗಳಿಗೆ ಬರುತ್ತಾರೆ. ಜನವರಿಯಲ್ಲಿ ಹಾಜರಾತಿ ಪ್ರಮಾಣ ಅಧಿಕವಾಗುತ್ತದೆ ಎಂಬ ನಿರೀಕ್ಷೆಯಿದೆ'' ಎಂದು ತಿಳಿಸಿದರು.