ಮಂಗಳೂರು, ಡಿ.05 (DaijiworldNews/MB) : ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಯಿಂದ ಬಳಲುತ್ತಿದ್ದ 22 ವರ್ಷದ ಯುವತಿಯನ್ನು ಪುತ್ತೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ಮೂಲಕ ಅಲ್ಪಾವಧಿಯಲ್ಲಿಯೇ ಸಾಗಿಸಿದ ಆಂಬುಲೆನ್ಸ್ನ ಬೆಂಗಾವಲಿನಲ್ಲಿ ಸುಮಾರು 15 ವಾಹನಗಳನ್ನು ಅಜಾಗರೂಕತೆಯಿಂದ ಚಲಾಯಿಸಿರುವುದನ್ನು ನೆಟ್ಟಿಗರು ತೀವ್ರವಾಗಿ ಟೀಕಿಸಿದ್ದಾರೆ.



ಬುಧವಾರ, ಆಂಬ್ಯುಲೆನ್ಸ್ ಚಾಲಕ ಮೊಹಮ್ಮದ್ ಹನೀಫ್ ಎಂಬವರು ಪುತ್ತೂರಿನ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ವೈದೇಹಿ ಆಸ್ಪತ್ರೆಗೆ ಕರೆದೊಯ್ದಿದ್ದರು.
ಆಂಬ್ಯುಲೆನ್ಸ್ ಬೆಂಗಾವಲಿಗೆ 15 ಕ್ಕೂ ಹೆಚ್ಚು ಕಾರುಗಳು ಇದ್ದದ್ದು ವೀಡಿಯೊದಲ್ಲಿ, ಗಮನಕ್ಕೆ ಬಂದಿವೆ. ಅಷ್ಟೇ ಅಲ್ಲದೇ ವಾಹನದಲ್ಲಿರುವವರು ಕಾರಿನಿಂದ ತಲೆ ಹೊರಹಾಕುತ್ತಿರುವುದು ಹಾಗೂ ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಇದಲ್ಲದೆ, ಹಾಸನದ ತನ್ನೀರುಹಳ್ಳದಲ್ಲಿ ಝೀರೋ ಟ್ರಾಫಿಕ್ನಲ್ಲಿ ರೋಗಿಯನ್ನು ಸ್ಥಳಾಂತರಿಸುವುದನ್ನು ವೀಕ್ಷಿಸುತ್ತಿದ್ದ ಬೈಸಿಕಲ್ ಸವಾರ ಅದೃಷ್ಟವಶಾತ್ ಸಣ್ಣ ಗಾಯ ಮಾತ್ರವಾಗಿ ಜೀವಾಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕನಿಗೆ ತನ್ನ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ಅಲ್ಪಾವಧಿಯಲ್ಲಿಯೇ ರೋಗಿಯನ್ನು ಸ್ಥಳಾಂತರಿಸಿದ ಆಂಬ್ಯುಲೆನ್ಸ್ ಚಾಲಕನನ್ನು ಜನರು ಶ್ಲಾಘಿಸಿದರೂ, ರೋಗಿಯ ಆಂಬುಲೆನ್ಸ್ಗೆ ಬೆಂಗಾವಲಾಗಿದ್ದ ಖಾಸಗಿ ವಾಹನಗಳನ್ನು ಅಜಾಗರೂಕತೆಯಿಂದ ಚಲಾಯಿಸಿದ್ದಕ್ಕೆ ಸಾರ್ವಜನಿಕರು ತೀವ್ರವಾಗಿ ಟೀಕಿಸಿದ್ದಾರೆ.
ವಿಡಿಯೋ ತುಣುಕು ತನ್ನ ಗಮನಕ್ಕೆ ಬಂದಿದೆ ಆದರೆ ಯಾವುದೇ ದೂರು ಬಂದಿಲ್ಲ. ಏಕೆಂದರೆ ಈ ತುಣುಕು ಹಾಸನ ಜಿಲ್ಲೆಯಿದ್ದಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ ಎಂ ಲಕ್ಷ್ಮಿ ಪ್ರಸಾದ್ ಆಂಗ್ಲ ದಿನಪತ್ರಿಕೆಗೆ ತಿಳಿಸಿದ್ದಾರೆ.