ಕಾಸರಗೋಡು, ಡಿ.05 (DaijiworldNews/MB) : ಒಂದೂವರೆ ವರ್ಷದ ಮಗುವಿನ ಮೃತದೇಹ ಪೆರ್ಲ ಸಮೀಪದ ಬಾವಿಯಲ್ಲಿ ಪತ್ತೆಯಾಗಿದ್ದು, ನಿಗೂಢ ಸಾವಿನ ಬಗ್ಗೆ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.


ಸಾಂದರ್ಭಿಕ ಚಿತ್ರ
ಪೆರ್ಲ ಕಾಟುಕುಕ್ಕೆ ಬಳಿಯ ಪೆರ್ಲತ್ತಡ್ಕದ ಬಾಬು - ಶಾರದಾ ದಂಪತಿ ಪುತ್ರ ಸ್ವಸ್ತಿಕ್ ಮೃತಪಟ್ಟ ಬಾಲಕ. ನಿನ್ನೆ (ಶುಕ್ರವಾರ) ಈ ಘಟನೆ ನಡೆದಿದೆ.
ಬಾಬು ಬೆಳಿಗ್ಗೆ ಕೂಲಿ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನದ ವೇಳೆಗೆ ಮಗು ನಾಪತ್ತೆಯಾಗಿರುವುದಾಗಿ ಲಭಿಸಿದ ಮಾಹಿತಿಯಂತೆ ಮನೆಗೆ ತಲುಪಿ ಹುಡುಕಾಟ ನಡೆಸಿದ್ದರು. ಪರಿಸರವಾಸಿಗಳು ಶೋಧ ನಡೆಸಿದ್ದು, ಮನೆಯಿಂದ 300 ಮೀಟರ್ ದೂರದ ಸಾರ್ವಜನಿಕ ಬಾವಿಯಲ್ಲಿ ಮಗು ಬಿದ್ದಿರುವುದನ್ನು ಪತ್ತೆಹಚ್ಚಿದ್ದಾರೆ.
ಕೂಡಲೇ ಪರಿಸರವಾಸಿಗಳು ಸೇರಿ ಮಗುವನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸಿದರೂ ಮೃತಪಟ್ಟಿತ್ತು. ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಮಾಹಿತಿ ಕಲೆ ಹಾಕಿದರು. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಮಗುವಿನ ತಾಯಿ ಮಾನಸಿಕ ಅಸ್ವಸ್ಥತೆ ವ್ಯಕ್ತಪಡಿಸುತ್ತಿದ್ದು, ತಪಾಸಣೆ ಬಳಿಕ ಪುತ್ತೂರಿನಲ್ಲಿರುವ ತಾಯಿ ಮನೆಗೆ ಕೊಂಡೊಯ್ಯಲಾಗಿದೆ, ಮೃತದೇಹವನ್ನು ಇಂದು ಬೆಳಿಗ್ಗೆ ಮಹಜರು ನಡೆಸಿದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕೋಜಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.