ವಿಶೇಷ ವರದಿ : ಆರ್.ಬಿ.ಜಗದೀಶ್
"ಇಷ್ಟ ಪಟ್ಟು ಮಾಡುವ ವೃತ್ತಿಯಲ್ಲಿ ತೃಪ್ತಿ ದೊರಕುತ್ತದೆ. ಕಷ್ಟ ಪಟ್ಟು ಮಾಡುವ ವೃತ್ತಿಯಲ್ಲಿ ಕೇವಲ ದಣಿವು ಮಾತ್ರ ಇರುತ್ತದೆ". ಇಂತಹ ದೃಢ ನಂಬಿಕೆಯೊಂದಿಗೆ ಕೃಷಿ ಕಾಯಕಕ್ಕೆ ಇಳಿದವರು ನಿವೃತ್ತ ಬ್ಯಾಂಕ್ ಮಹಿಳಾ ಅಧಿಕಾರಿ ಪ್ರಭಾವತಿ ಭಟ್. ಮೂಲತಃ ಇವರು ಕಾರ್ಕಳ ತಾಲೂಕು ಕಡ್ತಲ ಗ್ರಾಮದ ದರ್ಬುಜೆಯವರು. ಕಳೆದ ಮೂವತ್ತು ವರ್ಷಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿ ವಿಜಯ ಬ್ಯಾಂಕ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಪತಿ ಡಿ.ಎ.ಭಟ್ ಅವರು ಕೂಡಾ ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತರಾದವರು. ಇವರಿಗೆ ಇಬ್ಬರು ಮಕ್ಕಳು ಅರ್ಚನಾ ಭಟ್, ಅನುಪ್ ಭಟ್ ಇವರಿಬ್ಬರು ಪ್ರಸ್ತುತ ಬೆಂಗಳೂರಿನ ಕಂಪೆನಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನಳನಳಿಸುತ್ತಿರುವ ಶ್ರೀಗಂಧದ ಗಿಡ
2010ರಲ್ಲಿ ಪ್ರಭಾವತಿ ಭಟ್ ಬ್ಯಾಂಕ್ ಸೇವೆಗೆ ಸ್ವಯಂ ನಿವೃತ್ತಿ ಹೊಂದಿ ಪತಿಯೊಂದಿಗೆ ಊರ ಕಡೆ ಮುಖ ಮಾಡಿದರು. ಪಿತ್ರಾರ್ಜಿತ ಆಸ್ತಿಯಿಂದ ಇವರ ಪಾಲಿಗೆ ಬಂದ 13 ಎಕರೆ ಜಾಗದಲ್ಲಿ ಕೃಷಿ ಕಾಯಕ ಮಾಡ ಬಯಸಿದರು. ಆ ಸಂದರ್ಭದಲ್ಲಿ ಬರೀ ಪಾಳು ಬಿದ್ದ ಆ ಭೂಮಿಯಲ್ಲಿ ಗಿಡಗಂಟೇಗಳೆ ತುಂಬಿ ಹೋಗಿತ್ತು. ಪ್ರಸಕ್ತ ದಿನಗಳಲ್ಲಿ ಆ ಭೂಮಿ ಕೃಷಿಯಿಂದ ಹಸರು ನಳನಳಿಸುತ್ತಿವೆ. ಎಲ್ಲ ತರದ ಕೃಷಿ ಉತ್ಪನ್ನಗಳು ಇಲ್ಲಿ ಕಾಣ ಸಿಗುತ್ತದೆ. ಅವುಗಳಲ್ಲಿ ಜೌಷಧಿಯ ಗಿಡಗಳು, ಶ್ರೀಗಂಧ, ತುಳಸಿ, ಕೆಂಪು ಚಂದನ,ಲವಂಗ, ಜಾಯಿಕಾಯಿ, ಕರಿ ಬೇವು, ಕಹಿ ಬೇವು, ಮಾವು, ಹಲಸು, ಚಿಕ್ಕು, ಸೀತಾಫಲ, ರಾಮ್ ಫಲ, ಲಕ್ಷ್ಮಣ ಫಲ, ಅಂಜುರಾ, ಪುನರ್ಪುಳಿ, ಹುಣಸೆ, ಗೇರು, ಬಾಳೆ, ಬಸಳೆ, ತೊಂಡೆ, ನುಗ್ಗೆ, ತೆಂಗು,ಅಡಿಕೆ,ಅನಾಸನು, ಕಾಳು ಮೆಣಸು, ಪೊದೆ ಕಾಳು ಮೆಣಸು, ದೀವಿ ಹಲಸು, ರಾಜ ನೆಲ್ಲಿಕಾರು, ಬೆಟ್ಟದ ನೆಲ್ಲಿಕಾಯಿ, ಬೀಮ್ಪುಳಿ, ಪೇರಳೆ, ಅಲಂಕೃತ ಹೂವಿನ ಗಿಡಗಳು, ಜೊತೆಗೆ ಹೈನುಗಾರಿಕೆಗೆ ಅಗತ್ಯ ಬೇಕಾದ ಹುಲ್ಲು ಕೂಡಾ ಬೆಳೆಸುತ್ತಿದ್ದಾರೆ.
ಹೈನುಗಾರಿಕೆ:
ಆರಂಭದಲ್ಲಿ ಇವರು ಊರ ದನಗಳನ್ನು ಹೊಂದಿದರಾದರೂ ನಂತರದ ದಿನಗಳಲ್ಲಿ ಅದರಿಂದಲೇ ಮಿಶ್ರ ತಳಿಯ ದನಗಳನ್ನು ಪಡೆದು ಹೈನುಗಾರಿಕೆಯನ್ನು ವೃದ್ಧಿಸಿಕೊಂಡಿದ್ದಾರೆ. ಪ್ರಸ್ತುತ ನಾಲ್ಕು ಮಿತ್ರತಳಿಯ ದನಗಳು, ಮೂರು ಕರುಗಳನ್ನು ಸಾಕುತ್ತಿದ್ದಾರೆ. ಸುಮಾರು 35 ಲೀಟರ್ ಹಾಲು ದೊರೆಯುತ್ತಿದ್ದು ಅದನ್ನು ಕಡ್ತಲ ಹಾಲು ಉತ್ಪಾದಕರ ಸಹಾರಿ ಸಂಘಕ್ಕೆ ನೀಡುತ್ತಾ ಬಂದಿದ್ದಾರೆ.
ತನ್ನ ತೋಟದಲ್ಲಿ ಬೆಳೆಸಿರುವ ಹುಲ್ಲಿನ ಜೊತೆಗೆ ಹೊರಗಿನಿಂದ ಪಡೆದುಕೊಳ್ಳುವ ಬೈಹುಲ್ಲನ್ನು ದನಗಳಿಗೆ ನೀಡುತ್ತಿದ್ದಾರೆ. ದನದ ಮೂತ್ರ,ಸೆಗಣಿಯನ್ನು ಗೊಬ್ಬರವಾಗಿ ತಯಾರಿಸಿ ಕೃಷಿ ಕಾಯಕಕ್ಕೆ ಬಳಸುತ್ತಿದ್ದಾರೆ.
ಶ್ರೀಗಂಧ,ಕೆಂಪು ಚಂದನ:
ಶ್ರೀಗಂಧ,ಕೆಂಪು ಚಂದನ ಬೆಳೆ ಇಲ್ಲಿನ ವಿಶೇಷವಾಗಿದೆ. 100ಕ್ಕೂ ಮಿಕ್ಕಿ ಶ್ರೀ ಗಂಧದ ಗಿಡಗಳನ್ನು ನೆಟ್ಟಿದ್ದಾರೆ. ಅಷ್ಟೇ ಪ್ರಮಾಣದಲ್ಲಿ ಕೆಂಪು ಚಂದನ ಹಾಗೂ ಸಾಗುವಾನಿ ಗಿಡಗಳನ್ನು ಬೆಳೆಸುತ್ತಿದ್ದಾರೆ. ಅದರ ರಕ್ಷಣೆಗೆ ಬೇಕಾದ ಪರಿಕ್ರಮಗಳನ್ನು ಅಳವಡಿಸಿದ್ದಾರೆ.
ತೆಂಗಿನ ತೋಟ:
ಸ್ಥಳೀಯ ತಳಿಯ ಮಾತ್ರವಲ್ಲ ಗೆಂದಾಳೆ ಸಸಿಗಳು ಇಲ್ಲಿವೆ. ಮಂಗಗಳ ಕಾಟದಿಂದ ತಪ್ಪಿಸಿಕೊಳ್ಳುವ ಸಲುವಾಗಿ ತೆಂಗಿನ ಮರಗಳಿಗೆ ಡಬ್ಬಿಯ ಕವಚಗಳನ್ನು ಅಳವಡಿಸಿದ್ದಾರೆ. ಸುಮಾರು ೨೦೦ ತೆಂಗಿನ ಗಿಡ ಹಾಗೂ ಮರಗಳಿವೆ. ಇವುಗಳಿಗೆ ಸಾವಯವ ಗೊಬ್ಬರವನ್ನೇ ಬಳಸುತ್ತಿದ್ದಾರೆ.
ಕೃಷಿಗೆ ಮಗನ ಒತ್ತಾಸೆ
ಪ್ರಭಾವತಿ ಭಟ್ರವರ ಮಗ ನುಪ್ ಪದವೀಧರನಾಗಿದ್ದರೂ, ಕೃಷಿಗೆ ಹೆಚ್ಚಿನ ರೀತಿ ಒತ್ತು ನೀಡುತ್ತಾ ಬಂದಿದ್ದಾರೆ. ಅದಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿತಿಂಗಳೂ ಕೃಷಿಗಾಗಿ ತನ್ನ ಸಂಪಾದನೆಯ ಒಂದಿಷ್ಟು ಪಾಲು ವಿನಿಯೋಗಿಸುತ್ತಾ ಬಂದಿದ್ದಾರೆ. ಊರಿಗೆ ಬಂದಾಗಲೂ ತಾನೇ ಖುದ್ದಾಗಿ ಕೃಷಿ ಸಲಕರಣೆಗಳನ್ನು ಹಿಡಿದುಕೊಂಡ ತೋಟಕ್ಕೂ ಹೋಗುವ ಪರಿಪಾಠವನ್ನು ಬೆಳೆಸಿದ್ದಾರೆ. ಮಾಯನಗರಿಯಲ್ಲಿ ವೃತ್ತಿಗೆ ಗುಡ್ಬೈ ಹೇಳಿ ಕೃಷಿ ಕಾಯಕದ ಕಡೆ ಮುಂದಿನ ದಿನಗಳಲ್ಲಿ ಒಲವು ತೋರಿಸುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿರುವುದನ್ನು ಪ್ರಭಾವತಿ ಭಟ್ ಗಮನ ಸೆಳೆದಿದ್ದಾರೆ.