ಉಡುಪಿ, ಡಿ.06 (DaijiworldNews/HR) : ವಿಶ್ವ ಹಿಂದು ಪರಿಷತ್ ಉಡುಪಿ ಜಿಲ್ಲಾ ಘಟಕ ಮತ್ತು ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇದರ ವತಿಯಿಂದ ಪೇಜಾವರ ಮಠದ ರಾಮ ವಿಠ್ಠಲ ಸಂಭಾಗಣದಲ್ಲಿ ಶನಿವಾರ ಸಂತರ ಸಭೆ ನಡೆಯಿತು.




ಅದಮಾರು ಮಠಾಧೀಶರಾದ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಅದಮಾರು ಮಠಾಧೀಶರಾದ, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು ತಲಾ ಒಂದು ಲಕ್ಷ ಹಣವನ್ನು ರಾಮಮಂದಿರ ನಿರ್ಮಾಣಕ್ಕೆ ಕೊಡುವುದಾಗಿ ಈ ಸಂದರ್ಭದಲ್ಲಿ ಘೋಷಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿಯವರು ಮಾತನಾಡಿ, "ಅಯೋಧ್ಯೆಯಲ್ಲಿ ಐತಿಹಾಸಿಕ ಭವ್ಯ ರಾಮಮಂದಿರ ನಿರ್ಮಾಣ ಮಾಡುವುದು ಶತಮಾನಗಳ ಕನಸು. ಆ ಕನಸು ನನಸು ಮಾಡುವ ದಿನ ಹತ್ತಿರದಲ್ಲಿದೆ. ಆದಷ್ಟು ಬೇಗ ನಿರ್ಮಾಣವಾಗಲಿ ಎಂದು ಆಶಯ ವ್ಯಕ್ತ ಪಡಿಸಿದರು. ಅದಕ್ಕಾಗಿ ಎಲ್ಲರೂ ಕೈ ಜೋಡಿಸಬೇಕು ಎಂದು ಸಹಕಾರ ಕೋರಿದರು".
ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಈ ಸಭೆಯನ್ನು ಉದ್ದೇಶಿಸಿ ಮಾತನಾಡಿ, "ಪ್ರತಿಯೊಬ್ಬರ ಮನಸ್ಸಿನಲ್ಲಿ ರಾಮನಿದ್ದಾನೆ. ಪ್ರತಿಯೊಬ್ಬರನ್ನು ಬೆಸೆಯುವ ಶಕ್ತಿ ರಾಮ ಮಂದಿರಕ್ಕಿದೆ. ರಾಮಮಂದಿರ ನಿರ್ಮಾಣ ಎಲ್ಲಾ ಹಿಂದು ಧರ್ಮದವರ ಒಕ್ಕೊರಲ ಅಭಿಪ್ರಾಯ. ಶೀಘ್ರವೇ ಈ ನಿರ್ಮಾಣ ಕಾರ್ಯ ಯಾವುದೇ ತೊಡಕ್ಕಿಲ್ಲದೆ ನಡೆಯುವಂತೆ ರಾಮದೇವರು ಅನುಗ್ರಹಿಸಲಿ ಎಂದು ಆಶೀರ್ವಚನ ನೀಡಿದರು".
ಇನ್ನು ಅದಮಾರು ಮಠಾಧೀಶರಾದ ಪರ್ಯಾಯ ಶ್ರೀಈಶಪ್ರಿಯತೀರ್ಥ ಮಾತನಾಡಿ, "ಶ್ರೀ ರಾಮ ಇಡೀ ಭರತ ಖಂಡಕ್ಕೆ ಸಂಬಂದ ಪಟ್ಟವರು. ರಾಮಮಂದಿರಕ್ಕೆ ಜಗತ್ತಿನಲ್ಲೆಡೆಯಿಂದ ಜನರು ಬರುವಂತಾಗಬೇಕು. ಅವರ ಜೀವನ ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಒಂದು ಕಾಲದಲ್ಲಿ ಕಳೆದುಕೊಂಡದ್ದನ್ನು ಮತ್ತೆ ಪಡೆದು ಕೊಳ್ಳುತ್ತಿದ್ದೇವೆ. ಅದಕ್ಕೆ ರಾಮಮಂದಿರವೇ ಸೂಚನೆ ಎಂದರು."
ಸೋದೆ ಮಠದ ಶ್ರೀ ವಿಶ್ವ ವಲ್ಲಭ ತೀರ್ಥರು, ಮಾತನಾಡಿ, "ರಾಮನ ಪ್ರತಿಷ್ಠಾಪನೆ ಎಂದರೆ ಅದು ರಾಮ-ಸೀತಾ ಕಲ್ಯಾಣ ದಂತೆ. ಅದು ದೇಶದ ಕಲ್ಯಾಣ ವಾದಂತೆ. ಮಂದಿರವು ಉತ್ತರ ಭಾರತದ ನಾಗರಶೈಲಿಯಲ್ಲಿದೆ. ಅದು ವೈವಿಧ್ಯತೆಯನ್ನು ಬಿಂಬಿಸುವ ಕೇಂದ್ರವಾಗಬೇಕು. ಅಲ್ಲಿ ನಡೆಯುವ ರಥೋತ್ಸವ ಉತ್ಸವಗಳು ದ.ಕನ್ನಡ ಮತ್ತು ಉಡುಪಿಯ ಶೈಲಿಯಲ್ಲಿ ನಡೆಯುವಂತಾಗಲಿ ಎಂದು ಆಶಿಸಿದರು".
ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥರು, ಆನೆಗುಂದಿ ಸಂಸ್ಥಾನದ ಸರಸ್ವತಿ ಪೀಠಾಧಿಪತಿ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮಿಜಿ, ಆರ್ ಎಸ್ ಎಸ್ ಕುಟುಂಬ ಪ್ರಭೋದಿನಿ ಪ್ರಮುಖರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ವಿಶ್ವ ಹಿಂದು ಪರಿಷತ್ ಸುನಿಲ್ ಕೆ ಆರ್, ಮಾತೃ ಮಂಡಳಿಯ ಪೂರ್ಣಿಮಾ ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.