ಉಡುಪಿ, ಡಿ.06 (DaijiworldNews/MB) : ಸುಟ್ಟ ಗಾಯದಿಂದ ಗಂಭೀರ ಸ್ಥಿತಿಯಲ್ಲಿದ್ದ ಯುವಕನನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿ ಮಾನವಿಯತೆ ಮರೆದ ಘಟನೆ ಶನಿವಾರ ನಡೆದಿದೆ.


ಗಾಯಾಳು ವ್ಯಕ್ತಿಯನ್ನು ಪೆರಂಪಳ್ಳಿ ಸನಿಹದ ನಿವಾಸಿ ಶ್ರೀಧರ್ (35), ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದನೆಂದು ತಿಳಿದು ಬಂದಿದೆ.
ಒಂದು ವಾರದ ಹಿಂದೆ ಅಡಿಗೆ ತಯಾರಿಸುವಾಗ ಅನ್ನದ ಬಿಸಿ ತೆಳಿಯು ಇತನ ಮೈಮೇಲೆ ಬಿದ್ದು ದೇಹದ ಬಹುಭಾಗ ಸುಟ್ಟು ಗಾಯಗಳಾದವೆಂದು ಗಾಯಳು ಹೇಳಿಕೊಂಡಿದ್ದಾನೆ.
ಗಾಯಾಳು ಅಸಹಾಯಕನಾಗಿ ಚಿಕಿತ್ಸೆ ಪಡೆಯಲಾಗದೆ ಮನೆಯಲ್ಲಿಯೇ ದಿನಗಳ ಕಳೆಯುತ್ತಿದ್ದರಿಂದ, ಸುಟ್ಟ ಗಾಯಗಳು ಉಲ್ಭಣಗೊಂಡು ಆರೋಗ್ಯ ಸ್ಥಿತಿ ಗಂಭೀರಗೊಂಡು, ಸನಿಹದಲ್ಲಿ ವಾಸನೆ ಬರಲಾರಂಭಿಸಿದೆ.
ವಿಷಯ ತಿಳಿದು ಸಮಾಜಸೇವಕ ವಿಶು ಶೆಟ್ಟಿ ಅವರು ತಕ್ಷಣ ತಮ್ಮ ವಾಹನದಲ್ಲಿ ಗಾಯಾಳುವನ್ನು ಸಾಗಿಸಿ ಆಸ್ಪತ್ರೆಗೆ ದಾಖಲು ಪಡಿಸಿದ್ದಾರೆ.
ನನಗೆ ನನ್ನವರು ಎಂಬುವರು ಯಾರಿಲ್ಲ, ನನ್ನ ಪರಿಸ್ಥಿತಿ ಹೀಗಾಯಿತಲ್ಲ ಎಂದು ಮರುಗಿದಾಗ, ವಿಶು ಶೆಟ್ಟಿ ಅವರು ಗುಣಮುಖ ಆಗುವರೆಗಿನ ಜವಾಬ್ದಾರಿ ತಾನು ಹೊರುತ್ತೆನೆಂದು ಯುವಕನಿಗೆ ಭರವಸೆ ನೀಡಿ ಧೈರ್ಯ ತುಂಬಿದ್ದಾರೆ.
ಯುವಕನ ಸಂಬಂಧಿಕರು ತುರ್ತಾಗಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೆಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.