ಸುಬ್ರಹ್ಮಣ್ಯ, ಡಿ.06 (DaijiworldNews/PY): ಸುಪ್ರಸಿದ್ಧ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ನಕ್ಷತ್ರ ದಿನವಾದ ರವಿವಾರದಂದು ಆಶ್ಲೇಷ ಪೂಜೆ ನೆರವೇರಿಸಲು ಹೆಚ್ಚಿನ ಜನ ಸಂಖ್ಯೆ ಕಂಡುಬಂದಿದ್ದು, ದೇವಾಲಯದ ಸುತ್ತಮುತ್ತ ಜನಜಂಗುಳಿ ಕಂಡುಬಂದಿದೆ.


ದೇವಾಲಯದ ರಥ ಬೀದಿ, ಹೊರಾಂಗಣದಲ್ಲಿ ಭಾರಿ ಸಂಖ್ಯೆಯ ಜನ ಸೇರಿದ್ದು, ರಶೀದಿಗಾಗಿ ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು. ಈ ನಡುವೆ ಸೀಮಿತ ಸಂಖ್ಯೆಯಲ್ಲಿ ಸೇವಾ ರಶೀದಿ ವಿತರಿಸುವ ಕಾರಣ ದೂರದಿಂದ ಬಂದ ಭಕ್ತರಿಗೆ ರಶೀದಿ ಸಿಗದೇ ಸೇವಾ ಕೌಂಟರ್ ಸಿಬ್ಬಂದಿಗಳ ಜೊತೆ ವಾಗ್ವಾದವಾದ ಘಟನೆಯೂ ನಡೆದಿದೆ.
ಪೂಜೆಯ ರಶೀದಿಗಾಗಿ ಭಕ್ತರು ರಥಬೀದಿಯಲ್ಲಿ ಸಾಲಾಗಿ ನಿಂತಿದ್ದಾರೆ. ಸರ್ಕಲ್ನಿಂದ ಗೋಪುರದವರೆಗೆ ಸುಮಾರು ರಾತ್ರಿ 12 ಗಂಟೆಯಿಂದ ಬೆಳಗ್ಗೆ ಆರು ಗಂಟೆಯವರೆಗೂ ಜನಜಂಗುಳಿ ಕಂಡುಬಂದಿದೆ.