ಮಂಗಳೂರು, ಡಿ.06 (DaijiworldNews/MB) : ಗೃಹರಕ್ಷಕರ ಅವರ ಸೇವೆಯು ಸಂಕಟದ ಸಮಯದಲ್ಲಿ ಸಾಬೀತಾಗಿದೆ ಎಂದು ಡಿಸೆಂಬರ್ 6 ರ ರವಿವಾರ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ ಅವರು ಹೇಳಿದರು.










ಅವರು ಇಲ್ಲಿನ ಮೇರಿ ಹಿಲ್ನಲ್ಲಿರುವ ಜಿಲ್ಲಾ ಗೃಹರಕ್ಷಕ ಕಚೇರಿಯಲ್ಲಿ ನಡೆದ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆಯಲ್ಲಿ ಮಾತನಾಡಿದರು.
ಕೊರೊನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮುಂಚೂಣಿಯ ಯೋಧರಾಗಿ ಹೋಮ್ ಗಾರ್ಡ್ಗಳು ಮಾಡಿದ ಪ್ರಾಮಾಣಿಕ ಪ್ರಯತ್ನಗಳನ್ನು ಅಭಿನಂದಿಸಿದ ಡಿಸಿ, "ಕೆಲವೊಮ್ಮೆ ನೀವು ಒಳ್ಳೆಯ ಕೆಲಸ ಮಾಡುವಾಗ ಅದು ಗಮನಕ್ಕೆ ಬಾರದು. ಆದರೆ ಭರವಸೆಯನ್ನು ಕಳೆದುಕೊಳ್ಳದೆ ನೀವು ಸಮಾಜದ ಸುಧಾರಣೆಗಾಗಿ ನಿಮ್ಮ ಪ್ರಾಮಾಣಿಕ ಸೇವೆಯನ್ನು ಮುಂದುವರಿಸಬೇಕು ಎಂದು ಹೇಳಿದರು.
"ಕಾನೂನು ಮತ್ತು ಸುವ್ಯವಸ್ಥೆ ಅಪಾಯದಲ್ಲಿದ್ದಾಗ ಹಾಗೂ ಕಠಿಣ ಕಾಲದಲ್ಲಿ ನೀವು ಶ್ಲಾಘನೀಯ ಕೆಲಸವನ್ನು ಮಾಡಿದ್ದೀರಿ" ಎಂದು ಜಿಲ್ಲಾಧಿಕಾರಿ ಗೃಹರಕ್ಷಕ ಸಿಬ್ಬಂದಿಗಳಿಗೆ ಹೇಳಿದರು.
"ನೀವು ಹೆಚ್ಚುವರಿ ಜವಾಬ್ದಾರಿಯೊಂದಿಗೆ ಕೆಲಸ ಮಾಡಬೇಕು. ಜನರ ನಿರೀಕ್ಷೆಗೆ ತಕ್ಕಂತೆ ಬದುಕಬೇಕು. ಮಂಗಳೂರಿನಂತಹ ಸ್ಥಳಗಳಲ್ಲಿ ನೀವು ವರ್ಷದ 365 ದಿನಗಳವರೆಗೆ ಸವಾಲುಗಳನ್ನು ಎದುರಿಸಬೇಕಾಗುತ್ತದೆ" ಎಂದರು.
ಜಿಲ್ಲಾ ಗೃಹರಕ್ಷಕ ದಳದ ಮಾಜಿ ಕಮಾಂಡೆಂಟ್ ಬಿ.ಕೆ.ಶಿವಪ್ರಸಾದ್ ರೈ ಮಾತನಾಡಿ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಅಪಾಯ ಉಂಟಾದ ವೇಳೆ ಹಾಗೂ ನೈಸರ್ಗಿಕ ವಿಪತ್ತುಗಳು ನಡೆದ ಸಂದರ್ಭ ಎನ್ಡಿಆರ್ಎಫ್ ಅಥವಾ ಇತರ ರಾಜ್ಯ ಪಡೆಗಳು ಸ್ಥಳಕ್ಕೆ ಆಗಮಿಸುವ ಮುನ್ನ ಗೃಹರಕ್ಷಕರು ಮತ್ತು ರಕ್ಷಣಾ ಸಿಬ್ಬಂದಿಗಳು ಧಣಿವರಿಯದೆ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು.
ಗೃಹರಕ್ಷಕರು ಮತ್ತು ರಕ್ಷಣಾ ಸಿಬ್ಬಂದಿಗಳು ಸರ್ಕಾರದ ನಡುವಿನ ಸೇತುವೆಯಾಗಿದೆ. ಆದ್ದರಿಂದ ಸಮಾಜದಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ಮುರಳಿ ಮೋಹನ್ ಮಾತನಾಡಿ, "ಜಾತಿ, ಧರ್ಮ ಮತ್ತು ವೃತ್ತಿಯನ್ನು ಲೆಕ್ಕಿಸದೆ, ಯಾವುದೇ ತಾರತಮ್ಯವಿಲ್ಲದೆ, ಎಲ್ಲಾ ಜನರಿಗೆ ಗೃಹರಕ್ಷಕರು ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನೀವು ದೇಶದ ಸೈನಿಕರು. ಕೊರೊನಾ ವೈರಸ್ ಬಿಕ್ಕಟ್ಟಿನ ಈ ಸಮಯದಲ್ಲಿ ಸಮಾಜಕ್ಕಾಗಿ ನಿಮ್ಮ ಸೇವಾ ಮನೋಭಾವನೆ ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ಆರೋಗ್ಯಕರ ದೇಶವನ್ನು ರಚಿಸಲು ನಾವೆಲ್ಲರೂ ಕೈಜೋಡಿಸೋಣ ಎಂದು ಹೇಳಿದರು.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಗೃಹರಕ್ಷಕರ ಸೇವೆಯನ್ನು ಶ್ಲಾಘಿಸಿದ್ದಾರೆ ಎಂದು ಅವರು ನೆನೆಪಿಸಿಕೊಂಡರು.
ಗೃಹರಕ್ಷಕ ದಳದ ಉಪ ಕಮಾಂಡೆಂಟ್ ರಮೇಶ್ ಅವರು ಸಭೆಯನ್ನು ಸ್ವಾಗತಿಸಿದರು. ಮುರಳೀಧರ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ, ಸುರತ್ಕಲ್ನ ಘಟಕ ಉಸ್ತುವಾರಿ ಅಧಿಕಾರಿ ರಮೇಶ್, ಬೆಳ್ತಂಗಡಿಯ ಘಟಕ ಉಸ್ತುವಾರಿ ಅಧಿಕಾರಿ ಜಯಾನಂದ್, ಮೂಡಬಿದಿರೆಯ ಘಟಕ ಉಸ್ತುವಾರಿ ಅಧಿಕಾರಿ ಪಾಂಡಿರಾಜ್, ಪಣಂಬೂರು ಘಟಕ ಉಸ್ತುವಾರಿ ಅಧಿಕಾರಿ ಶಿವಪ್ಪ ನಾಯಕ್, ವಿಟ್ಲ ಘಟಕ ಉಸ್ತುವಾರಿ ಅಧಿಕಾರಿ ಸಂಜೀವ ಅವರನ್ನು ಸನ್ಮಾನಿಸಲಾಯಿತು.