ಬೈಂದೂರು, ಡಿ.07 (DaijiworldNews/MB) : ನವವಿವಾಹಿತರು ತಮ್ಮ ಹನಿಮೂನ್ ಬಗ್ಗೆ ಮೊದಲೇ ಪ್ಲಾನ್ ಮಾಡುವುದು ಸಹಜ. ಆದರೆ ಈ ತಾಲ್ಲೂಕಿನ ಅನುದೀಪ್ ಹೆಗ್ಡೆ ಮತ್ತು ಮಿನುಷ ಕಾಂಚನ್ ದಂಪತಿಗಳು ತಾವು ಹನಿಮೂನ್ಗೆ ಹೋಗುವುದಕ್ಕಿಂತ ಹೆಚ್ಚು ತಾವು ಬೀಚ್ ಸ್ವಚ್ಛಗೊಳಿಸುವುದ್ದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಸತತವಾಗಿ ಒಂಬತ್ತು ದಿನಗಳ ಕಾಲ ಈ ನವದಂಪತಿಗಳು ಬೀಚ್ ಸ್ವಚ್ಛತಾ ಕಾರ್ಯ ನಡೆಸಿದ್ದು ಸೋಮೇಶ್ವರ ಕಡಲತೀರದ ಒಂದು ಭಾಗದಲ್ಲಿದ್ದ ಎಲ್ಲಾ ಕಸಕಡ್ಡಿಗಳನ್ನು ಸ್ವಚ್ಛಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ನವಜೋಡಿಯು ಈಗ ಹನಿಮೂನ್ಗೆ ತೆರಳಲು ತಯಾರಿ ನಡೆಸಿದ್ದಾರೆ.


ಅನುದೀಪ್ ಡಿಜಿಟಲ್ ಮಾರ್ಕೆಟಿಂಗ್ನಲ್ಲಿದ್ದರೆ, ಮಿನುಷಾ ಔಷಧೀಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಈ ಜೋಡಿಯು ನವೆಂಬರ್ 18 ರಂದು ತಮ್ಮ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತಮ್ಮ ದಾಂಪತ್ಯ ಜೀವನದ ನೆನಪುಗಳು ಅಚ್ಚಳಿಯದಂತೆ ನೆನಪಿನಲ್ಲಿ ಉಳಿಯಬೇಕು ಎಂಬ ಉದ್ದೇಶದಿಂದ ಅವರು ಸೋಮೇಶ್ವರ ಕಡಲ ತೀರವನ್ನು ಸ್ವಚ್ಛಗೊಳಿಸಲು ನಿರ್ಧರಿಸಿದರು. ಈ ದಂಪತಿಗಳು ಮೊದಲ ಏಳು ದಿನಗಳಲ್ಲಿ ಅವರು 500 ಕೆಜಿ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಿದ್ದು ಕಳೆದ ಎರಡು ದಿನಗಳಿಂದ ಸ್ಥಳೀಯರು ಅವರೊಂದಿಗೆ ಕೈಜೋಡಿಸಿದ್ದಾರೆ. ಕಡಲತೀರದ 700 ಮೀಟರ್ಗಳನ್ನು ಈಗ ಸ್ವಚ್ಛಗೊಳಿಸಲಾಗಿದೆ. ಒಟ್ಟಾರೆಯಾಗಿ ಸುಮಾರು 700 ರಿಂದ 800 ಕೆ.ಜಿ. ತ್ಯಾಜ್ಯವನ್ನು ಈ ಜೋಡಿಯು ಸಂಗ್ರಹಿಸಿದ್ದಾರೆ.
ನವೆಂಬರ್ 27 ರಿಂದ ಈ ದಂಪತಿ ಸೋಮೇಶ್ವರ ಕಡಲತೀರದಲ್ಲಿದ್ದ ತ್ಯಾಜ್ಯ ವಸ್ತುಗಳನ್ನು ಹೆಕ್ಕಿ ಬೀಚ್ ಸ್ವಚ್ಛಗೊಳಿಸಲು ಪ್ರಾರಂಭಿಸಿದ್ದಾರೆ. ಪ್ರತಿದಿನ ಈ ದಂಪತಿ ಬೀಚ್ ಸ್ವಚ್ಛಗೊಳಿಸಲೆಂದು ದಿನದ ಎರಡು ಗಂಟೆಗಳ ಸಮಯವನ್ನು ಮೀಸಲಿರಿಸುತ್ತಾರೆ. ಮದ್ಯದ ಬಾಟಲಿಗಳು, ಪಾದರಕ್ಷೆಗಳು ಮತ್ತು ಇತರ ಪರಿಸರಕ್ಕೆ ಅಪಾಯಕಾರಿಯಾದ ವಸ್ತುಗಳನ್ನು ಒಟ್ಟುಗೂಡಿಸಿದ್ದಾರೆ
ನಾವು ಪ್ರಾರಂಭಿಸಿದ ಈ ಸ್ವಚ್ಛತಾ ಅಭಿಯಾನದಿಂದಾಗಿ ಈಗ ಹೆಚ್ಚಿನ ಜನರು ಆಕರ್ಷಿತರಾಗಿ ಈ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅನುದೀಪ್ ಹೆಗ್ಡೆ ಸಂತೋಷ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈಗ ಹಸನ್ ಹಾಗೂ ಅವರ ತಂಡ ಮತ್ತು ಬೈಂದೂರಿನ ಮಂಜುನಾಥ್ ಶೆಟ್ಟಿ ಕೂಡ ಈ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದರು.