ಮಂಗಳೂರು, ಡಿ.07 (DaijiworldNews/MB) : "ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಚುನಾವಣೆಯಲ್ಲಿ 10,39,217 ಮತದಾರರು ಮತ ಚಲಾಯಿಸಲಿದ್ದಾರೆ. ಚುನಾವಣೆಗೆ ಇವಿಎಂ ಬಳಕೆ ಇಲ್ಲ" ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾಹಿತಿ ನೀಡಿದರು.


ಡಿಸೆಂಬರ್ 7 ರ ಸೋಮವಾರ ನಗರದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, "220 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆಯು 1,527 ಮತಗಟ್ಟೆಗಳಲ್ಲಿ ನಡೆಯಲಿದೆ. ಮುಂಬರುವ ಚುನಾವಣೆಗೆ ಜಿಲ್ಲೆಯಲ್ಲಿ 10,39,217 ಮತದಾರರಿದ್ದಾರೆ. ಅದರಲ್ಲಿ 5,12,908 ಪುರುಷರು, 5,26,288 ಮಹಿಳೆಯರು ಮತ್ತು 21 ಇತರ ವಿಭಾಗದ ಮತದಾರರಾಗಿದ್ದಾರೆ. ಡಿಸೆಂಬರ್ 22 ಮತ್ತು 27 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 7 ರಂದು ಮೊದಲ ಹಂತದ ಚುನಾವಣೆಗೆ ಮತ್ತು ಡಿಸೆಂಬರ್ 11 ರಂದು ಎರಡನೇ ಹಂತದ ಚುನಾವಣೆಗೆ ಚುನಾವಣಾ ಅಧಿಸೂಚನೆ ನೀಡಲಾಗುವುದು" ಎಂದು ತಿಳಿಸಿದರು.
"ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನ ಡಿಸೆಂಬರ್ 11 ಆಗಿದ್ದು, ಎರಡನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಡಿಸೆಂಬರ್ 16 ಕೊನೆಯ ದಿನವಾಗಿದೆ. ಮೊದಲ ಹಂತದ ಚುನಾವಣೆಗೆ ಸಲ್ಲಿಕೆಯಾದ ನಾಮಪತ್ರಗಳನ್ನು ಡಿಸೆಂಬರ್ 12 ರಂದು ಮತ್ತು ಎರಡನೇ ಹಂತದ ಚುನಾವಣೆಗೆ ಸಲ್ಲಿಕೆಯಾದ ನಾಮಪತ್ರಗಳನ್ನು ಡಿಸೆಂಬರ್ 17 ರಂದು ಪರಿಶೀಲಿಸಲಾಗುವುದು. ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದವರು ಡಿಸೆಂಬರ್ 14 ರ ಒಳಗೆ ಹಾಗೂ ಎರಡನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದವರು ಡಿಸೆಂಬರ್ 19 ರ ಒಳಗೆ ಹಿಂಪಡೆಯಬಹುದು" ಎಂದು ತಿಳಿಸಿದರು.
"ಮರುಚುನಾವಣೆಯ ಅಗತ್ಯವಿದ್ದರೆ, ಮೊದಲ ಹಂತದ ಚುನಾವಣೆ ಡಿಸೆಂಬರ್ 24 ರಂದು ಮತ್ತು ಎರಡನೇ ಹಂತದ ಡಿಸೆಂಬರ್ 29 ರಂದು ನಡೆಯಲಿದೆ. ಎರಡೂ ಹಂತದ ಚುನಾವಣೆಗಳ ಎಣಿಕೆ ಡಿಸೆಂಬರ್ 30 ರಂದು ನಡೆಯಲಿದೆ" ಎಂದು ಹೇಳಿದರು.
"ಮೊದಲ ಹಂತದಲ್ಲಿ ಮಂಗಳೂರು, ಮೂಡುಬಿದಿರೆ ಹಾಗೂ ಬಂಟ್ವಾಳ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ ಬೆಳ್ತಂಗಡಿ, ಪುತ್ತೂರು, ಸುಳ್ಯ ಮತ್ತು ಕಡಬಾ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆಗಾಗಿ 220 ಚುನಾವಣಾ ಅಧಿಕಾರಿಗಳನ್ನು ಮತ್ತು 233 ಸಹಾಯಕ ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದೆ. ನಾವು ಚುನಾವಣೆಗೆ ಅಗತ್ಯವಾದ ಮತಪೆಟ್ಟಿಗೆಗಳ ವ್ಯವಸ್ಥೆಯನ್ನು ಮಾಡಿದ್ದೇವೆ. ಚುನಾವಣೆಗೆ 2,626 ಮತಪೆಟ್ಟಿಗೆಗಳಿವೆ" ಎಂದು ತಿಳಿಸಿದರು.
''ಚುನಾವಣಾ ಆಯೋಗದ ಪ್ರಕಾರ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾರರ ಪಟ್ಟಿಯ ಅಂತಿಮ ಪಟ್ಟಿಯನ್ನು ಆಗಸ್ಟ್ 31 ರಂದು ಬಿಡುಗಡೆ ಮಾಡಲಾಗಿದೆ. ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಬೇಕಾದರೆ, ಮೊದಲ ಹಂತದ ಚುನಾವಣೆಯ ಪ್ರದೇಶದವರು ಡಿಸೆಂಬರ್ 3 ರಂದು ಹಾಗೂ ಎರಡನೇ ಹಂತದ ಚುನಾವಣಾ ಪ್ರದೇಶದವರು ಡಿಸೆಂಬರ್ 8 ರವರೆಗೆ ಸೇರಿಸಿಕೊಳ್ಳಬಹುದು'' ಎಂದು ಮಾಹಿತಿ ನೀಡಿದರು.
''228 ಗ್ರಾಮ ಪಂಚಾಯಿತಿಗಳ ಪೈಕಿ 220 ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ನಡೆಯಲಿದೆ. ಮೂರು ಗ್ರಾಮ ಪಂಚಾಯಿತಿಗಳ ಅವಧಿಯನ್ನು ವಿಸ್ತರಿಸಲಾಗಿದ್ದು, ಐದು ಗ್ರಾಮ ಪಂಚಾಯಿತಿಗಳಿಗೆ ನವೀಕರಣ ಅಧಿಸೂಚನೆ ಇದೆ'' ಎಂದರು.