ಮಂಗಳೂರು, ಡಿ. 07 (DaijiworldNews/HR): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರನ್ನು ಮರು ನಾಮಕರಣ ಮಾಡಬೇಕೆಂದು ಒತ್ತಾಯಿಸಿ ಬಿಲ್ಲವ ಬ್ರಿಗೇಡ್ ಸೋಮವಾರ ಬೃಹತ್ ಬೈಕ್ ರ್ಯಾಲಿಯನ್ನು ನಡೆಸಿದ್ದು, ಪೊಲೀಸರು ಮಧ್ಯಪ್ರವೇಶಿಸಿ ರ್ಯಾಲಿಯನ್ನು ನಿಲ್ಲಿಸಿದ್ದಾರೆ.







ಕೆಂಜಾರುನಿಂದ ಬೈಕ್ ರ್ಯಾಲಿ ಪ್ರಾರಂಭವಾಗಿದ್ದು, ಅದನ್ನು ಪೊಲೀಸರು ತಡೆದಿದ್ದು ಬಳಿಕ ಬೈಕ್ ಸವಾರರು ತಮ್ಮ ಬೈಕ್ಗಳನ್ನು ಬಿಟ್ಟು ಮರವೂರಿನಿಂದ ಕೆಂಜಾರಿನವರೆ ಘೋಷಣೆ ಕೂಗುತ್ತಾ ಪಾದಯಾತ್ರೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸತ್ಯಜಿತ್ ಸುರತ್ಕಲ್ ಮಾತನಾಡಿ"ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡದಿದ್ದರೆ ಪ್ರತಿಭಟನೆ ಮುಂದುವರಿಯುತ್ತದೆ. ರಾಜ್ಯ ಸರ್ಕಾರಕ್ಕೆ ಕಳುಹಿಸಿದ ಮೇಲ್ಮನವಿ ಪತ್ರಕ್ಕೆ ಯಾವುದೇ ಉತ್ತರ ಬಂದಿಲ್ಲ. ಕೋಟಿ ಚೆನ್ನಯರು ತುಳುನಾಡಿನ ಮಹಾಪುರುಷರು ಆದ್ದರಿಂದ ಇಲ್ಲಿನ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡಬೇಕು. ನಾವು ಗೆಲುವು ಸಾಧಿಸುವವರೆಗೂ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ. ವಿಮಾನ ನಿಲ್ದಾಣದ ಹೆಸರು ಬದಲಾಗುವವರೆಗೂ ನಾವು ವಿಶ್ರಾಂತಿ ಪಡೆಯುವುದಿಲ್ಲ"ಎಂದರು.