ಉಡುಪಿ,ಡಿ. 07 (DaijiworldNews/HR): ಲೇಖಕ, ಖ್ಯಾತ ರಂಗಕರ್ಮಿ, ಉಪನ್ಯಾಸಕರಾಗಿದ್ದ ಉದ್ಯಾವರ ಮಾಧವ ಆಚಾರ್ಯ (80) ಅವರು ಮಣಿಪಾಲ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ.

ಮಾಧವ ಆಚಾರ್ಯ ಅವರು 1941 ಫೆ 25ರಂದು ಜನಿಸಿದ್ದು, ಉಡುಪಿಯ ಕಲ್ಯಾಣಪುರದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಬಳಿಕ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
ಇನ್ನು ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಮಾಧವ ಆಚಾರ್ಯ ನಂತರ ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ 3 ದಶಕಗಳ ಕಾಲ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಮಾಧವ ಆಚಾರ್ಯ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ, ರಂಗವಿಶಾರದ ಬಿರುದು ಮುಂತಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿದೆ.
ಬಾಗಿದ ಮರ, ಭಾಗದೊಡ್ಡಮ್ಮನ ಕಥೆ ಮುಂತಾದ ಕಥಾ ಸಂಕಲನಗಳು, ಹಾಗೂ ಕವನ ಸಂಕಲನಗಳು ಮತ್ತು ಕೃಷ್ಣನ ಸೋಲು, ಗೋಡೆ, ಗಾಂಧಾರಿ, ರಾಧೆ ಎಂಬ ಗಾಥೆ ಮುಂತಾದ ನಾಟಕಗಳನ್ನು ರಚಿಸಿದ್ದಾರೆ.