ಕಾಪು, ಡಿ. 07 (DaijiworldNews/SM): ಏಕಾಂಗಿಯಾಗಿ ವಾಸಿಸುತ್ತಿದ್ದ ಮಹಿಳೆಯೋರ್ವರು ಹೃದಯಾಘಾತದಿಂದ ಮೃತ ಪಟ್ಟಿದ್ದು, ಒಂದುವಾರದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಕಾಪುವಿನ ಸಿಟಿ ಸೆಂಟರ್ ವಸತಿ ಸಂಕೀರ್ಣದಲ್ಲಿ ವಾಸವಾಗಿದ್ದ ವಿದ್ಯಾ ಸರಸ್ವತಿ ಮೃತಪಟ್ಟವರಾಗಿದ್ದಾರೆ.

ಕಾಪುವಿನ ಸಿಟಿ ಸೆಂಟರ್ ವಸತಿ ಸಂಕೀರ್ಣದಲ್ಲಿ ಪುತ್ತೂರಿನ ನಿವಾಸಿ ಶ್ರೀಮತಿ ವಿದ್ಯಾ ಸರಸ್ವತಿ ಎಂಬವರು ವಾಸಿಸುತ್ತಿದ್ದರು. ಅವರು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅವರು ಬೆಳಿಗ್ಗೆ ಕೆಲಸಕ್ಕೆ ತೆರಳಿದವರು ಸಂಜೆ ಮನೆಗೆ ಬರುತ್ತಿದ್ದರು. ಹೀಗಾಗಿ ಅವರು ಸಂಕೀರ್ಣದ ಯಾರೊಂದಿಗೂ ಬೆರೆಯುತ್ತಿರಲಿಲ್ಲ.
ಸೋಮವಾರ ಬೆಳಗ್ಗಿನ ಜಾವ ಅವರ ರೂಮಿನಿಂದ ಕೆಟ್ಟ ವಾಸನೆ ಹೊರ ಬರುತ್ತಿದ್ದದ್ದನ್ನು ಪಕ್ಕದ ಕೋಣೆಯ ನಿವಾಸಿಗಳು ಕಾಪು ಪೊಲೀಸರಿಗೆ ತಿಳಿಸಿದ್ದಾರೆ. ಕಾಪು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಪಂಚರ ಸಮಕ್ಷಮ ರೂಮಿನ ಬಾಗಿಲು ಒಡೆದು ನೋಡಿದಾಗ, ಮಹಿಳೆಯ ಮೃತದೇಹ ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ.