ಉಡುಪಿ, ಡಿ. 07 (DaijiworldNews/SM): ಹಿರಿಯ ರಂಗಕರ್ಮಿ ಉದ್ಯಾವರದ ಮಾಧವ ಆಚಾರ್ಯ ವಯೋಸಹಜ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.

ರಂಗ ನಿರ್ದೇಶಕ ಕಥೆಗಾರ, ಕವಿ, ನಟ, ಪ್ರಸಿದ್ಧ ಗುಡ್ಡೆದ ಭೂತ ಧಾರಾವಾಹಿಯ ನಟ, ಉಡುಪಿಯ ಸಮೂಹ ಸಂಸ್ಥೆಯ ಸಂಸ್ಥಾಪಕ, ನಾಟಕ, ನೃತ್ಯ ರೂಪಕ ಮೂಲಕ ರಾಜ್ಯಾದ್ಯಂತ ಜನಮನ್ನಣೆಗಳಿಸಿದ್ದರು.
ನಾಡಿನಾದ್ಯಂತ 50ಕ್ಕೂ ಹೆಚ್ಚು ನಾಟಕ, ನೃತ್ಯರೂಪಕಗಳಿಗೆ ನಿರ್ದೇಶನಗೈದ ಇವರು ರಾಜ್ಯೋತ್ಸವ, ರಂಗ ವಿಶಾರದ ಪ್ರಶಸ್ತಿಗೆ ಭಾಜನರಾಗಿದ್ದರು. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಉಪನ್ಯಾಸಕರಾಗಿದ್ದ ಇವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಯಕ್ಷಗಾನ ಕಲಾರಂಗದ ಸದಸ್ಯರಾಗಿದ್ದ ಇವರು ಯಕ್ಷಗಾನ ವೃತ್ತಿ ಕಲಾವಿದರಿಗಾಗಿ ಆರಂಭಗೊಂಡ ‘ಪ್ರೊ. ಬಿ. ವಿ. ಆಚಾರ್ಯ ಯಕ್ಷನಿಧಿ’ಯ ಆರಂಭ ಕಾಲದಲ್ಲಿ ವಿಶೇಷವಾಗಿ ಕಾರ್ಯನಿರ್ವಹಿಸಿದ್ದರು. 2004ರಲ್ಲಿ ಇವರ ನೇತೃತ್ವದಲ್ಲಿ ಯಕ್ಷಗಾನ ಕಲಾರಂಗದ ತಂಡ ಅಮೇರಿಕಾದಲ್ಲಿ ಜರುಗಿದ ‘ಅಕ್ಕ ಸಮ್ಮೇಳನ’ದಲ್ಲಿ ಭಾಗವಹಿಸಿ ಅಮೇರಿಕದಾದ್ಯಂತ 11 ಕಡೆಗಳಲ್ಲಿ ಪ್ರದರ್ಶನ ನೀಡಿತ್ತು.