ಮಂಗಳೂರು, ಡಿ.08 (DaijiworldNews/MB) : ಇತ್ತೀಚೆಗೆ ಬಿಜೈನ ಅಪಾರ್ಟ್ಮೆಂಟ್ನ ಗೋಡೆಯಲ್ಲಿ ಹಾಗೂ ನಗರದ ಕೋರ್ಟ್ ರೋಡ್ನಲ್ಲಿ ಕೋರ್ಟ್ಗೆ ಸಮೀಪವಾಗಿರುವ ಕೋರ್ಟ್ ಪ್ರಿಮಿಸಸ್ನ ಹಳೇ ಪೊಲೀಸ್ ಔಟ್ ಪೋಸ್ಟ್ನ ಗೋಡೆಯ ಮೇಲೆ ಪ್ರಚೋದನಕಾರಿ ಬರಹಗಳನ್ನು ಬರೆದ ಆರೋಪಿಗಳ ಪರವಾಗಿ ವಕಾಲತ್ತು ವಹಿಸಬಾರದು ಎಂದು ವಕೀಲರ ಸಂಘ ನಿರ್ಣಯಿಸಿದ್ದು ಈ ಆರೋಪಿಗಳ ಪರ ವಾದಿಸದಂತೆ ವಕೀಲರ ಸಂಘದ ಸದಸ್ಯರಿಗೆ ಸಂಘವು ತಿಳಿಸಿದೆ.

ಡಿಸೆಂಬರ್ 7 ರಂದು ವಕೀಲರ ಸಂಘದ ಅಧ್ಯಕ್ಷ ಎಂ.ನರಸಿಂಹ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದ್ದು ಮಂಗಳೂರು ವಕೀಲರ ಸಂಘದ ಸದಸ್ಯರು ದೇಶದ್ರೋಹ, ಭಯೋತ್ಪಾದನೆಯಲ್ಲಿ ಭಾಗಿಯಾಗಿರುವ ಅಥವಾ ಬೆಂಬಲ ನೀಡಿದವರ ಪ್ರಕರಣಗಳಿಗೆ ಕಾನೂನು ನೆರವು, ಸಹಕಾರ ನೀಡುವುದಿಲ್ಲ ಎಂದು ನಿರ್ಧರಿಸಿದರು.
ಹಾಗೆಯೇ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥರ ಪರ ವಾದಿಸದಂತೆ ಸಂಘದ ಮುಖ್ಯ ಕಾರ್ಯದರ್ಶಿ ಸಂಘದ ಸದಸ್ಯರಿಗೆ ಮನವಿ ಮಾಡಿದರು.
ನವೆಂಬರ್ 9 ರಂದು, ನಗರದ ಕೋರ್ಟ್ ರೋಡ್ನಲ್ಲಿ ಕೋರ್ಟ್ಗೆ ಸಮೀಪವಾಗಿರುವ ಕೋರ್ಟ್ ಪ್ರಿಮಿಸಸ್ನ ಹಳೇ ಪೊಲೀಸ್ ಔಟ್ ಪೋಸ್ಟ್ನ ಗೋಡೆಯ ಮೇಲೆ ಪ್ರಚೋದನಕಾರಿ ಬರಹವನ್ನು ಬರೆಯಲಾಗಿದ್ದು ಅದು ಉರ್ದುವಿನಲ್ಲಿರುವುದರಿಂದ ಜನರು ಅದನ್ನು ಅರ್ಥಮಾಡಿಕೊಳ್ಳಲಿಲ್ಲ. ಆದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಪ್ರಚಾರವನ್ನು ಪಡೆಯುವ ಉದ್ದೇಶದಿಂದಲ್ಲೇ ಆರೋಪಿಗಳು ಮಾಡಿದ್ದ ಈ ಕೃತ್ಯವು ಜನರ ಗಮನವನ್ನು ಸೆಳೆದಿಲ್ಲ ಎಂಬ ಕಾರಣದಿಂದ ನಿರಾಶೆಗೊಂಡ ಆರೋಪಿಗಳು ನವೆಂಬರ್ 27 ರ ಮುಂಜಾನೆ 4 ರಿಂದ 4.30 ರ ಸುಮಾರಿಗೆ ಬಿಜೈನ ಅಪಾರ್ಟ್ಮೆಂಟ್ನ ಗೋಡೆಯಲ್ಲಿ ಉಗ್ರರ ಪರ ಗೋಡೆ ಬರಹವನ್ನು ಬರೆದಿದ್ದರು. ಈ ಪ್ರಕರಣವನ್ನು ಪೊಲೀಸರು ಆರು ದಿನಗಳಲ್ಲಿ ಭೇದಿಸಿ ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.