ಉಡುಪಿ, ಡಿ.08 (DaijiworldNews/MB) : ಹಿರಿಯ ಪತ್ರಕರ್ತ ಶಿಕ್ಷಣ ತಜ್ಞ ಸಾಮಾಜಿಕ ಕಾರ್ಯಕರ್ತ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ದ ಮಾಜಿ ಅಧ್ಯಕ್ಷ ದಾಮೋದರ ಐತಾಳ್ (85 ವರ್ಷ) ಇಂದು ಬೆಳಗ್ಗೆ ಉಡುಪಿಯಲ್ಲಿ ನಿಧನ ಹೊಂದಿದರು.

ಅನೇಕ ವರ್ಷಗಳ ಕಾಲ ನಾಡಿನ ವಿವಿಧ ಶಿಕ್ಷಕ ತರಬೇತಿ ಕಾಲೇಜುಗಳಲ್ಲಿ ಪ್ರಾಧ್ಯಾಪಕ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ, ಪತ್ರಕರ್ತರಾಗಿ (ಹೊಸದಿಗಂತ) ಉಡುಪಿ ಬಳಕೆದಾರ ವೇದಿಕೆ ವಿಶ್ವಸ್ಥ, ತುಳು ಶಿವಳ್ಳಿ ಮಾಧ್ವ ಮಹಾಂಮಡಲದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಪ್ರತಿಷ್ಠಿತ ಉಡುಪಿ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪನೆಗೆ ಶ್ರಮಿಸಿದ್ದ ಹಿರಿಯ ಸಾಮಾಜಿಕ ಧುರೀಣ ಕೆ. ದಾಮೋದರ ಐತಾಳರು ಮಂಗಳವಾರ ಬೆಳಿಗ್ಗೆ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಉಡುಪಿ ಬಳಕೆದಾರ ವೇದಿಕೆ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದು ಈ ಮೂಲಕ ಹಲವಾರು ಜನರಿಗೆ ನ್ಯಾಯ ದೊರಕಿಸುವ ಕೆಲಸ ಮಾಡಿದ್ದಾರೆ.
ಮಂಗಳೂರು ಡಿಡಿಪಿಐ ಕಚೇರಿಯಲ್ಲಿ ವಿಷಯ ಪರಿವೀಕ್ಷಣಾ ಅಧಿಕಾರಿಯಾಗಿದ್ದ ಐತಾಳರು, ಉಡುಪಿ ಶಿಕ್ಷಕರ ಸಹಕಾರಿ ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ದಾಮೋದರ್ ಐತಾಳ್ ಅವರು ಉಡುಪಿ ಕೃಷ್ಣ ಮಠದ ಚಿನ್ನರ ಸಂತರ್ಪಣೆ ಯೋಜನೆಯ ಆರಂಭದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ತಮ್ಮ ನಿವೃತ್ತಿ ಸಮಯದಲ್ಲೂ ಅನೇಕ ಸಂಘ ಸಂಸ್ಥೆಯಲ್ಲಿ ಗುರುತಿಸಿಕೊಂಡಿದ್ದರು. ವಯೋಸಹಜ ಅನಾರೋಗ್ಯದಿಂದ ಇಂದು ಬೆಳಿಗ್ಗೆ ಕಡಿಯಾಳಿಯಲ್ಲಿರುವ ಮನೆಯಲ್ಲಿ ನಿಧನರಾಗಿದ್ದಾರೆ. ಮೃತರು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.