ಮಂಗಳೂರು, ಡಿ.08 (DaijiworldNews/MB) : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ನೀಡಿರುವ ಭಾರತ್ ಬಂದ್ ಕರೆಗೆ ಬೆಂಬಲ ಸೂಚಿಸಿ ನಗರದ ನಂತೂರು ಸರ್ಕಲ್ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದೆ.





















































ವಿವಿಧ ಸಂಘಟನೆ, ರಾಜಕೀಯ ಪಕ್ಷಗಳು ರೈತರ ಭಾರತ್ ಬಂದ್ ಕರೆಗೆ ಬೆಂಬಲ ಸೂಚಿಸಿದ್ದು ರಾಸ್ತಾ ರುಕೋ ಚಳುವಳಿ ನಡೆಸಿದೆ. ಈ ರಸ್ತೆ ತಡೆಯಿಂದ ಸ್ಥಳದಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ.
ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇದ್ದು ಸಂಚಾರದಟ್ಟಣೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಸ್ತುತ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಹಸಿರು ಸೇನೆ ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಫರ್ನಾಂಡೀಸ್, ''ದಪ್ಪ ಚರ್ಮದ ರಾಜಕಾರಣಿಗಳಿಗೆ ರೈತರ ಸಂಕಟ ಅರ್ಥವಾಗುವುದಿಲ್ಲ. ಆ ಕಾರಣದಿಂದಾಗಿ ರೈತರು ಬೀದಿಗಿಳಿದು ಪ್ರತಿಭಟಿಸುವುದು ಅನಿವಾರ್ಯವಾಗಿದೆ'' ಎಂದರು.
ಈ ವೇಳೆ ಮಾತನಾಡಿದ ಮಾಜಿ ಎಂಎಲ್ಸಿ ಐವನ್ ಡಿಸೋಜಾ, ''12 ದಿನಗಳಿಂದ ರೈತರು ಕೇಂದ್ರ ಸರ್ಕಾರ ಪರಿಚಯಿಸಿದ ಕೃಷಿ ಮಸೂದೆಗಳನ್ನು ವಿರೋಧಿಸಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ರೈತರ ಮುಖದಲ್ಲಿ ನಗು ನೋಡಲಾಗದ ಸರ್ಕಾರ ಅವರ ಮೇಲಿನ ದೌರ್ಜನ್ಯ ನಡೆಸುತ್ತಿದೆ. ರೈತರು ಕಾರ್ಪೊರೇಟ್ ಕಂಪನಿಗಳಿಗೆ ತಲೆಬಾಗಬೇಕೆಂದು ಸರ್ಕಾರ ಬಯಸಿದೆ. ರೈತರನ್ನು ತೀವ್ರ ತೊಂದರೆಯಲ್ಲಿ ಸಿಲುಕಿಸಲು ಸರ್ಕಾರ ಬಯಸಿದೆ. ರೈತರು ತಮ್ಮ ಬೇಡಿಕೆಗಳನ್ನು ಮುಂದಿಟ್ಟಾಗ, ಸರ್ಕಾರವು ರೈತರ ವಿರುದ್ಧವಾಗಿ ಹಾಗೂ ಹೂಡಿಕೆದಾರರು, ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲಕರವಾದ ನೀತಿಯನ್ನು ರೂಪಿಸಿದೆ'' ಎಂದು ಹೇಳಿದರು.
ಇನ್ನು ಸರ್ಕಾರಕ್ಕೆ ರೈತರೊಂದಿಗೆ ಮಾತನಾಡಲು ಸಮಯವಿಲ್ಲ ಆದರೆ ಚುನಾವಣೆಯ ಸಮಯದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲು ಎಲ್ಲ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ರೈತರನ್ನು ಈ ರೀತಿ ನಿರ್ಲಕ್ಷಿಸಲಾಗುತ್ತಿದೆ. ಕೃಷಿ ಮಸೂದೆಗಳನ್ನು ತಕ್ಷಣ ಹಿಂಪಡೆಯಲು ನಾವು ಒತ್ತಾಯಿಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಯಾದವ ಶೆಟ್ಟಿ, ಜೆಡಿಎಸ್ ಮುಖಂಡ ಎಂ. ಬಿ. ಸದಾನಂದ ಮಾತನಾಡಿದ್ದು ಮಾಜಿ ಶಾಸಕ ಮೊಯ್ದೀನ್ ಬಾವಾ, ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ, ಮಹಿಳಾ, ರೈತ, ವಿದ್ಯಾರ್ಥಿ, ಕಾರ್ಮಿಕ ಸಂಘಟನೆಗಳ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ವಸಂತ್ ಆಚಾರಿ, ಭಾರತಿ ಬೋಳಾರ್, ಲಿಯೋ ನಝರತ್, ಸನ್ನಿ ಡಿಸೋಜಾ, ಆಲ್ವಿನ್ ಮಿನೇಜಸ್, ಸಂತೋಷ್ ಬಜಾಲ್, ಬಿಕೆ ಇಮ್ತಿಯಾಝ್, ವಿದ್ಯಾ ದಿನಕರ್, ಪ್ರಮೀಳಾ ದೇವಾಡಿಗ, ಜಯಂತಿ ಬಿ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.