ಬೆಳ್ತಂಗಡಿ, ಡಿ. 08 (DaijiworldNews/SM): ಇಲ್ಲಿನ ಸೋಮಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿ ನಾಪತ್ತೆಯಾಗಿದ್ದ ವ್ಯಕ್ತಿ ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಉಜಿರೆ ಶಿವಾಜಿನಗರ ನಿವಾಸಿ ರಮೇಶ್(48) ಎಂಬವರು ಘಟನೆಯಲ್ಲಿ ಮೃತಪಟ್ಟವರಾಗಿದ್ದಾರೆ.

ಮೀನು ಹಿಡಿಯಲೆಂದು ರಮೇಶ್ ಮತ್ತು ಇನ್ನೋರ್ವ ತೆರಳಿದ್ದರು. ಈ ವೇಳೆ ಇಬ್ಬರು ಕೂಡ ನಾಪತ್ತೆಯಾಗಿದ್ದರು. ರಮೇಶ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು. ತಕ್ಷಣ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೆ, ಸಿಸಿಟಿವಿ ದೃಶ್ಯಗಳನ್ನು ಕೂಡ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರಮೇಶ್ ಜೊತೆಗಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ ಎನ್ನುವ ವಿಚಾರ ತಿಳಿದುಬಂದಿದೆ.
ಇವರು ಬೆಳ್ತಂಗಡಿ ನ.ಪಂ. ಪಂಪ್ ಹೌಸ್ ಬಳಿ ನದಿಗೆ ಇಳಿದಿದ್ದರು. ಪಂಪ್ ಹೌಸ್ ಬಳಿಯ ನದಿ ತೀರದಲ್ಲಿ ಬಟ್ಟೆ, ಮೊಬೈಲ್ ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಅಗ್ನಿ ಶಾಮಕ ದಳದಿಂದ ಕಾರ್ಯಾಚರಣೆ ನಡೆಸಲಾಗಿತ್ತು. ನಿರಂತರ ಶೋಧ ನಡೆಸಿದ ಬಳಿಕ ಮಂಗಳವಾರ ಸಂಜೆ ವೇಳೆ ಓರ್ವನ ಶವ ಪತ್ತೆಯಾಗಿದೆ.
ಇನ್ನು ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ರಮೇಶ್ ಅವರ ಜೊತೆಯಲ್ಲಿದ್ದ ಮತ್ತೋರ್ವನನ್ನು ವಶಕ್ಕೆ ಪಡೆದ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ.