ಉಡುಪಿ, ಡಿ.09 (DaijiworldNews/MB) : ಉಡುಪಿ ನಗರದ ಪೂರ್ಣ ಪ್ರಜ್ಞಾ ಕಾಲೇಜಿನಿಂದ ಶ್ರೀಮತಿ ಅಮಣ್ಣಿ ರಾಮಣ್ಣ ಶೆಟ್ಟಿ ಹಾಲ್ಗೆ ಹೋಗುವ ರಸ್ತೆಯ ಬದಿಯಲ್ಲಿ ಕಳೆ ಗಿಡಗಳಿಂದ ತುಂಬಿರುವ ಖಾಲಿ ಜಾಗದಲ್ಲಿ 12 ಅಡಿ ಉದ್ದದ ಬೃಹತ್ ಗಾತ್ರದ ಸೇರಿದಂತೆ ಒಟ್ಟು ನಾಲ್ಕು ಹೆಬ್ಬಾವುಗಳು ಮಂಗಳವಾರ ಸಂಜೆ ವೇಳೆ ಪತ್ತೆಯಾಗಿದ್ದು ಗಣೇಶ್ ಆಚಾರ್ಯ ಅವರ ನೇತೃತ್ವದಲ್ಲಿ ರಕ್ಷಣಾ ಕಾರ್ಯಚರಣೆ ನಡೆಯಿತು.

ಖಾಸಗಿಯವರಿಗೆ ಸೇರಿದ್ದ ಖಾಲಿ ಜಾಗದಲ್ಲಿ ಹುಲ್ಲನ್ನು ಕಳೆದ ಎರಡು ವರ್ಷಗಳಿಂದ ತೆರವುಗೊಳಿಸಿರಲಿಲ್ಲ. ಇದರಿಂದ ಹೆಬ್ಬಾವು ವಾಸ ಮಾಡಿತ್ತು.
12 ಅಡಿ ಉದ್ದದ ಒಂದು, ಎಂಟು ಅಡಿ ಉದ್ದದ ಎರಡು ಹಾಗೂ ಐದು ಅಡಿ ಉದ್ದದ ಒಂದು ಹೆಬ್ಬಾವುಗಳು ಪತ್ತೆಯಾಗಿದ್ದು ಇನ್ನಷ್ಟು ಹೆಬ್ಬಾವಿನ ಮರಿ ಈ ಜಾಗದಲ್ಲಿ ಇರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಕುಂಜಿಬೆಟ್ಟುವಿನ ಗಣೇಶ್ ಆಚಾರ್ಯ ನೇತೃತ್ವದಲ್ಲಿ ರಕ್ಷಿಸಿ, ಬಳಿಕ ಸುರಕ್ಷಿತವಾಗಿ ಸಮೀಪದ ಅರಣ್ಯಕ್ಕೆ ಬಿಡಲಾಯಿತು. ಈ ವೇಳೆ ಬೃಹತ್ ಗಾತ್ರ ಹೆಬ್ಬಾವು ಗಣೇಶ್ ಆಚಾರ್ಯ ಕೈಗೆ ದಾಳಿ ನಡೆಸಿದ್ದು, ಇದರಿಂದ ಗಾಯಗೊಂಡ ಅವರಿಗೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ನ್ಯಾಯವಾದಿ ಲಕ್ಷ್ಮಣ್ ಶೆಣೈ, ಸುಧೀರ್ ನಾಯಕ್, ಅಟೋ ಚಾಲಕ ರಾಜ ಕುಮಾರ್, ಅಶ್ವಥ್ ಈ ಕಾರ್ಯಾಚರಣೆಯಲ್ಲಿ ತೊಡಗಿದ್ದರು.