ಉಡುಪಿ, ಡಿ.09 (DaijiworldNews/MB) : ಜಿಲ್ಲಾ ಕಾಂಗ್ರೆಸ್, ಕಿಸಾನ್ ಕಾಂಗ್ರೆಸ್, ದಲಿತ ಸಂಘರ್ಷ ಸಮಿತಿ, ರೈತ ಸಂಘಟನೆಗಳು, ಮುಸ್ಲಿಂ ಸಂಘಟನೆಗಳು ಮತ್ತು ಸಹಬಾಳ್ವೆ ಉಡುಪಿ ಡಿಸೆಂಬರ್ 8 ರ ಮಂಗಳವಾರ ಇಲ್ಲಿರುವ ಅಜ್ಜರಕಾಡಿನಲ್ಲಿ ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಿದರು.













ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿಗಳಾದ ಅಂಬಾನಿ ಮತ್ತು ಅದಾನಿಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮೂರು ಕೃಷಿ ಕಾನೂನುಗಳಿಗೆ ಮಾಡಿದ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ವಿದ್ಯುತ್ (ತಿದ್ದುಪಡಿ) ಮಸೂದೆಯ ಬಗ್ಗೆಯೂ ಮಾತನಾಡಿದ ಬಾಲಕೃಷ್ಣ ಅವರು, ''ಈ ಮಸೂದೆ ರಾಜ್ಯ ಸರ್ಕಾರದ ಮೇಲೆ 3,400 ಕೋಟಿ ರೂ.ಗಳ ಹೆಚ್ಚುವರಿ ಹೊರೆಯಾಗಿ ಪರಿಣಮಿಸುತ್ತದೆ. ಇದು ಕೇವಲ ವಿದ್ಯುತ್ ಸರಬರಾಜಿಗೆ ಬೇಕಾದ ಮೊತ್ತವನ್ನು ಒಳಗೊಂಡಿದೆ'' ಎಂದರು.
''ಭೂ ಸುಧಾರಣಾ ಕಾಯ್ದೆಯಿಂದ ರೈತರು ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳಬಹುದು. ಕಾರ್ಪೊರೇಟ್ ಕಂಪನಿಗಳು ಆ ಜಮೀನುಗಳನ್ನು ಖರೀದಿಸುತ್ತವೆ. ಈ ತಿದ್ದುಪಡಿ ಮಾಡಿದ ಕೃಷಿ ಕಾನೂನುಗಳ ಸತ್ಯವನ್ನು ಸಾರ್ವಜನಿಕರಿಗೆ ತಿಳಿಸುವ ಅವಶ್ಯಕತೆಯಿದೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ, "ಮೋದಿ ನೇತೃತ್ವದ ಸರ್ಕಾರ ರೈತರ ಹಿತಾಸಕ್ತಿಗಳನ್ನು ಪರಿಗಣಿಸದೆ ಅವರ ಇಚ್ಛೆಗೆ ವಿರುದ್ದವಾಗಿ ನಡೆಯುತ್ತಿದೆ. ಸರ್ಕಾರವು ಆ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳದಿದ್ದರೆ, ರೈತರು ಮುಂಬರುವ ಸ್ಥಳೀಯ ಸಂಸ್ಥೆಯ ಚುನಾವಣೆ ವೇಳೆ ಪ್ರತಿಕ್ರಿಯೆ ನೀಡುತ್ತಾರೆ'' ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಶಂಕರ್ ಮಾತನಾಡಿ, "ರೈತರು ನಮ್ಮ ದೇಶದ ಬೆನ್ನೆಲುಬು. ಆದರೆ ಇಡೀ ಕೃಷಿ ವ್ಯವಸ್ಥೆಯನ್ನು ನಾಶಮಾಡಲು ಸರ್ಕಾರ ಮುಂದಾಗಿದೆ. ವಿದ್ಯುತ್ ವಲಯದ ವ್ಯವಸ್ಥೆಯನ್ನು ಸಹ ಖಾಸಗೀಕರಣಗೊಳಿಸಲಾಗುತ್ತಿದೆ. ಬಂಡವಾಳಶಾಹಿಗಳು ಶೀಘ್ರದಲ್ಲೇ ರೈತರ ಒಡೆತನದ ಜಮೀನುಗಳ ಮೇಲೆ ಹಿಡಿತ ಸಾಧಿಸಲಿದ್ದಾರೆ'' ಎಂದು ಆತಂಕ ವ್ಯಕ್ತಪಡಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮುಸ್ಲಿಂ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸಿನ್ ಮಲ್ಪೆ, "ಸಾಂಕ್ರಾಮಿಕ ಸಮಯದಲ್ಲಿ ಕೃಷಿ ಕಾನೂನುಗಳನ್ನು ಸುಗ್ರೀವಾಜ್ಞೆಯ ಮೂಲಕ ಅಂಗೀಕರಿಸುವ ಅವಶ್ಯಕತೆ ಏನು ಎಂದು ಪ್ರಶ್ನಿಸಿದ್ದು ಇದರಿಂದಾಗಿ ರೈತರು ತಮ್ಮ ಅಸ್ತಿತ್ವಕ್ಕಾಗಿ ಹೆಣಗಾಡುವಂತಾಗಿದೆ'' ಎಂದರು.
ಕೃಷಿ ಕಾನೂನುಗಳ ತಿದ್ದುಪಡಿಯನ್ನು ಖಂಡಿಸಿ ಕಿಸಾನ್ ಕಾಂಗ್ರೆಸ್ ಮುಖಂಡ ಶಶಿಧರ್ ಶೆಟ್ಟಿ ಎರ್ಮಾಳು ಮಾತನಾಡಿ, "ಭಾರತ ಸರ್ಕಾರ ರೈತರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಅವರ ಜಮೀನುಗಳನ್ನು ಕಾಪೋರೇಟ್ ಕಂಪನಿಗಳಿಗೆ ಮಾರಾಟ ಮಾಡಲು ಯೋಜಿಸುತ್ತಿದೆ. ಕೃಷಿ ಕಾನೂನುಗಳನ್ನು ಜಾರಿಗೊಳಿಸಿದರೆ, ಖಾಸಗಿ ಜಮೀನುಗಳ ಆಕ್ರಮಣವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇರುವುದಿಲ್ಲ. ಬಿಜೆಪಿ ಸರ್ಕಾರದ ಈ ಕ್ರಮದ ವಿರುದ್ದ ಜನರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಉತ್ತರಿಸಬೇಕು'' ಎಂದು ಹೇಳಿದರು.
ಸಿಐಟಿಯುನ ವಿಶ್ವನಾಥ್ ರೈ, ಕವಿರಾಜ್, ವಿದ್ಯಾರಾಜ್, ಗಾಡ್ವಿನ್, ಕಾಂಗ್ರೆಸ್ ಮುಖಂಡರುಗಳಾದ ಮಹಾಬಲ ಕುಂದರ್, ಸುರೇಶ್ ನಾಯಕ್, ಅನ್ನಯ್ಯ ಶೇರಿಗಾರ್, ಸುರೇಂದ್ರ ಗಾಣಿಗ, ಕೀರ್ತಿ ಶೆಟ್ಟಿ, ಎನ್ಎಸ್ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಲ್, ಮಹಿಲಾ ಕಾಂಗ್ರೆಸ್ನ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಡಿಎಸ್ಎಸ್ ನಾಯಕ ಸುಂದರ್ ಮಾಸ್ಟರ್, ವಿಶ್ವನಾಥ ಪೆತ್ರಿ, ಇಸ್ಮಾಯಿಲ್ ಅತ್ರಾಡಿ, ಯಾಸಿನ್ ಕೋಡಿಬೆಂಗ್ರೆ, ಜೆಡಿಎಸ್ ಮುಖಂಡ ಜಯರಾಮ್ ಆಚಾರ್ಯ ಮತ್ತು ಇತರ ಸಂಘಗಳ ಕಾರ್ಯಕರ್ತರು ಉಪಸ್ಥಿತರಿದ್ದರು.