ಆಗ್ರಾ, ಜೂ13: ಐತಿಹಾಸಿಕ ತಾಜ್ ಮಹಲ್ನ ಪಶ್ಚಿಮ ದ್ವಾರವನ್ನು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ಗುಂಪೊಂದು ಧ್ವಂಸಗೊಳಿಸಿದ ಘಟನೆ ನಡೆದಿದೆ.
ತಾಜ್ ಮಹಲ್ನ ನಿರ್ಬಂಧಿತ ಪ್ರದೇಶದಲ್ಲಿ 400 ವರ್ಷಗಳಷ್ಟು ಹಳೆಯದಾದ ಶಿವ ದೇಗುಲಕ್ಕೆ ಹೋಗುವ ಮಾರ್ಗವಿದೆ. ಈ ಮಾರ್ಗಕ್ಕೆ ಭವ್ಯ ಸೌಧದ ಆವರಣ ಅಡ್ಡಿಯಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ತಾಜ್ ಮಹಲ್ ನ ಪಶ್ಚಿಮ ದ್ವಾರವನ್ನು ಕಿತ್ತೆಸೆದಿದ್ದಾರೆ. ಮಾತ್ರವಲ್ಲ, ತಾಜ್ ಆವರಣದಲ್ಲಿ ದಾಂಧಲೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಸುತ್ತಿಗೆ ಮತ್ತು ಕಬ್ಬಿಣದ ರಾಡ್ ಬಳಸಿ ಬಾಗಿಲಿಗೆ ಹೊಡೆದು, ತಾಜ್ ಮಹಲ್ ಪಶ್ಚಿಮ ಪ್ರವೇಶದ್ವಾರವನ್ನು ಧ್ವಂಸಗೊಳಿಸಲು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪ್ರಯತ್ನಿಸಿದ್ದಾರೆ. ಜೊತೆಗೆ ಹಿಂದೂ ಕಾರ್ಯಕರ್ತರು ಘೋಷಣೆಗಳನ್ನು ಸಹ ಕೂಗಿ ಗಲಾಟೆ ನಡೆಸಿದ್ದಾರೆ. ಈ ವೇಳೆ ಪೊಲೀಸರು, ತಾಜ್ ಪಶ್ಚಿಮ ದ್ವಾರದ ನಂತರ ಸಿಗುವ ಬಸಾಯಿ ಘಾಟ್ ನಲ್ಲಿರುವ ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗಲು ಇನ್ನೊಂದು ಮಾರ್ಗವಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ ಪೊಲೀಸರ ಯಾವ ಮಾತನ್ನು ಹಿಂದೂ ಪರ ಸಂಘಟನೆಗಳು ಕೇಳಿಲ್ಲ.
ಇದೀಗ ಈ ಘಟನೆಯ ವಿರುದ್ಧ ಭಾರತೀಯ ಪುರಾತತ್ವ ಇಲಾಖೆ ಆಗ್ರಾ ಪೋಲೀಸರಿಗೆ ದೂರು ನೀಡಿದೆ. ಐದು ಸದಸ್ಯರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.