ಬೆಂಗಳೂರು , ಜೂ 13: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮಕ್ಕಳನ್ನು ಗೆಲ್ಲಿಸಿಕೊಂಡು ಬೀಗುತ್ತಿರುವ ಅಪ್ಪಂದಿರ ಸಾಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಜತೆ ಇದೀಗ ಮಾಜಿ ಸಚಿವ ರಾಮಲಿಂಗಾರೆಡ್ಡಿ ಸೇರ್ಪಡೆಯಾಗಿದ್ದಾರೆ. ಮಗಳಾದ ಸೌಮ್ಯ ರೆಡ್ಡಿಯನ್ನು ಗೆಲ್ಲಿಸಿ ವಿಜಯದ ನಗು ಬೀರುತ್ತಿದ್ದಾರೆ ಮಾಜಿ ಸಚಿವ ರಾಮಲಿಂಗಾರೆಡ್ಡಿ.
ಇನ್ನು ಮಗಳ ಗೆಲುವಿನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ , ಜಯನಗರದಲ್ಲಿ ಕಾಂಗ್ರೆಸ್ ಗೆ ಗೆಲ್ಲಬೇಕಾದ ಅನಿವಾರ್ಯತೆ ಮತ್ತು ಜವಾಬ್ದಾರಿ ಇತ್ತು. ಈ ವಿಧಾನ ಕ್ಷೇತ್ರದಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇವೆ. ಇನ್ನು ಮುಂದೆ ಮಗಳು ಈ ಕ್ಷೇತ್ರದ ಶಾಸಕಿ ಆಗಿ ಕೆಲಸ ಮಾಡಿ ಜನ ಸಾಮಾನ್ಯರಿಗೆ ಸ್ಪಂದಿಸಲಿದ್ದಾಳೆ ಎಂದರು.
ನನ್ನ ಹಾದಿಯಲ್ಲಿಯೇ ಮಗಳು ನಡೆಯುತ್ತಿದ್ದಾಳೆ, ಕಲಿತಿದ್ದಾಳೆ. ಜಯನಗರದಲ್ಲಿ ಎಷ್ಟೇ ಮತದಲ್ಲಿ ಗೆದ್ದರೂ ಗೆಲುವು ಗೆಲುವೇ ಆಗಿರುತ್ತದೆ. ಆಕೆಯಲ್ಲಿ ಜನರಿಗೆ ಸಹಾಯ ಮಾಡಬೇಕು ಎಂಬ ತುಡಿತವಿದೆ. ಶಾಸಕಿಯಾಗಿ ಇದೆಲ್ಲವನ್ನು ಮುಂದೆ ಮಾಡಲಿದ್ದಾಳೆ ಎಂದರು.
ಇನ್ನು ಸಚಿವ ಸ್ಥಾನ ಕೈತಪ್ಪಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ನಾಲ್ಕು ಬಾರಿ ಸಚಿವನಾಗಿದ್ದೆ. ಈಗ ಸಚಿವರನ್ನಾಗಿ ಮಾಡಿ ಎಂದು ಕೇಳೋದಿಲ್ಲ. ಅನೇಕರಿಗೆ ಇದು ಕೈತಪ್ಪಿದೆ. ಯಾವುದೇ ನಾಯಕರ ಮನೆ ಬಾಗಿಲಿಗೆ ಹೋಗಿ ಸಚಿವನನ್ನಾಗಿ ಮಾಡಿ ಎಂದು ಕೇಳಿಕೊಳ್ಳುವುದಿಲ್ಲ ಎಂದು ಹೇಳಿದರು.