ಮಂಗಳೂರು, ಡಿ.09 (DaijiworldNews/MB) : ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಯಿಂದ ಬಳಲುತ್ತಿದ್ದ 22 ವರ್ಷದ ಯುವತಿಯನ್ನು ಪುತ್ತೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ಮೂಲಕ ಅಲ್ಪಾವಧಿಯಲ್ಲಿಯೇ ಸಾಗಿಸಿದ ಆಂಬುಲೆನ್ಸ್ನ ಬೆಂಗಾವಲಿನಲ್ಲಿ ವಾಹನಗಳನ್ನು ಅಜಾಗರೂಕತೆಯಿಂದ ಚಲಾಯಿಸಿರುವುದನ್ನು ಇತ್ತೀಚೆಗೆ ನೆಟ್ಟಿಗರು ಟೀಕಿಸಿದ್ದರು. ಈಗ ಝಿರೋ ಟ್ರಾಫಿಕ್ ನೆಪದಲ್ಲಿ ಒಟ್ಟಾರೆಯಾಗಿ ವಾಹನ ಚಲಾಯಿಸಿ ಸಂಚಾರಕ್ಕೆ ತೊಂದರೆ ಉಂಟು ಮಾಡಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಬಣಕಲ್ ಠಾಣೆಗೆ ದೂರು ನೀಡಿದ್ದಾರೆ.



ತುರ್ತು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಝಿರೋ ಟ್ರಾಫಿಕ್ ಮಾಡಲಾಗಿತ್ತು. ಆದರೆ ಆರು ದಿನ ಕಳೆದರೂ ಶಸ್ತ್ರಚಿಕಿತ್ಸೆ ನಡೆದಿಲ್ಲ. ಶಸ್ತ್ರ ಚಿಕಿತ್ಸೆ ಮಾಡಲು ಯಾವುದೇ ತುರ್ತು ಇಲ್ಲದಿದ್ದರೂ ಸುಮ್ಮನೇ ಜೀರೋ ಟ್ರಾಫಿಕ್ನಲ್ಲಿ ಕರೆದ್ಯೊಯಲಾಗಿದೆ. ಈ ಮೂಲಕ ಸಾವಿರಾರು ಜನರಿಗೆ ತೊಂದರೆ ಉಂಟು ಮಾಡಲಾಗಿದೆ ಎಂದು ದೂರಿನಲ್ಲಿ ಗಣೇಶ್ ಬಣಕಲ್ ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆಯೇ ದಾರಿಯಲ್ಲಿ ಓಡಾಡುವ ವಾಹನಗಳನ್ನು ತಡೆದು ಆಂಬುಲೆನ್ಸ್ ಮಾತ್ರವಲ್ಲದೆ ಅದಕ್ಕೆ ಬೆಂಗಾವಲಾಗಿ ಕೆಲವು ವಾಹನಗಳನ್ನು ಅಂತ್ಯತ ವೇಗವಾಗಿ ಚಲಾಯಿಸಿ ಜನರಲ್ಲಿ ಆತಂಕ ಉಂಟು ಮಾಡಲಾಗಿದೆ. ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಕಾರುಣ್ಯ ನಿಧಿ ಕರ್ನಾಟಕ ಚಾರಿಟೇಬಲ್ ಟ್ರಸ್ಟ್ನ ಕಾರ್ಯನಿರ್ವಾಹಕರಾದ ಹರ್ಷದ್ ಕೊಪ್ಪ, ನಿಸಾರ್ ನಿಚ್ಚು ಮಂಗಳೂರು, ಜಲೀಲ್ ಮತ್ತಿತರರು ಕಾರಣ ಎಂದು ಆರೋಪಿಸಿರುವ ಅವರು, ಕೆಎ 51 ಎಬಿ 7860 ನೋಂದಣಿಯ ಆಂಬ್ಯುಲೆನ್ಸ್ಗೆ ಇನ್ಸೂರೆನ್ಸ್ ಇಲ್ಲದಿರುವುದು, ರೋಡ್ ಟ್ಯಾಕ್ಸ್ ಕಟ್ಟದೇ ಇರುವುದು, ಎಫ್ಸಿ ಮಾಡದಿರುವುದು ಗೂಗಲ್ನಲ್ಲಿ ಸರ್ಚ್ ಮೂಲಕ ತಿಳಿದು ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ಆಂಬ್ಯುಲೆನ್ಸ್ ಸಹಿತ ಅಜಾಗರೂಕವಾಗಿ ಅತೀ ವೇಗದಲ್ಲಿ ಚಲಿಸಿದ ಇತರೆ ಎಲ್ಲಾ ವಾಹನಗಳನ್ನು ವಶಪಡಿಸಿಕೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.