ಮಂಗಳೂರು, ಡಿ.09 (DaijiworldNews/PY): 'ಕೋಟಿ ಚೆನ್ನಯರ ಮೂಲಸ್ಥಾನ ಪಡುಮಲೆ, ಗೆಜ್ಜೆಗಿರಿಯಲ್ಲ' ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.

ಕೋಟಿ ಚೆನ್ನಯರ ಮೂಲಸ್ಥಾನದ ವಿಚಾರವಾಗಿ ಹರಿಕೃಷ್ಣ ಬಂಟ್ವಾಳ್ ಅವರ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಹರಿಕೃಷ್ಣ ಬಂಟ್ವಾಳ್ ವಿರುದ್ದ ಗೆಜ್ಜೆಗಿರಿ ಕ್ಷೇತ್ರದ ಪ್ರಮುಖರು ಖಂಡನಾ ಸಭೆಯನ್ನೂ ಕೂಡಾ ನಡೆಸಿದ್ದಾರೆ.
ಸಮಾಜವನ್ನು ಒಡೆಯುವ ಭಕ್ತರನ್ನು ಗೊಂದಲಕ್ಕೆ ಸಿಲುಕಿಸುವ ಹೇಳಿಕೆಯನ್ನು ನೀಡಬಾರದು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವಂತ ಎಚ್ಚರಿಕೆಯನ್ನು ಕೂಡಾ ಗೆಜ್ಜೆಗಿರಿ ಕ್ಷೇತ್ರದ ಪ್ರಮುಖರು ನೀಡಿದ್ದಾರೆ.
ಕೋಟಿ ಚೆನ್ನಯರ ಮೂಲಸ್ಥಾನ ಕತ್ತಲೆಯಲ್ಲಿದೆ. ಪಡುಮಲೆ ಕೋಟಿ ಚೆನ್ನಯರ ಮೂಲಸ್ಥಾನ ಎನ್ನುವ ವಾದವನ್ನು ಕೂಡಾ ಮಂಡಿಸಿದ್ದು, ಅಲ್ಲದೇ, ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಗೂ ಕೂಡಾ ಆಕ್ಷೇಪ ವ್ಯಕ್ತಪಡಿಸಿದ್ದರು.
ಕೋಟಿ ಚೆನ್ನಯರ ಮೂಲಸ್ಥಾನದ ಬಗ್ಗೆ ಮಾತಾನಾಡಿದ ಹರಿಕೃಷ್ಣ ಬಂಟ್ವಾಳ್ ಅವರು, "ಇಷ್ಟೆಲ್ಲಾ ಹೆಸರಿದ್ದಂತ ಕೋಟಿ ಚೆನ್ನಯರ ಜನ್ಮಸ್ಥಾನ ಹಾಗೂ ಅವರ ಮೂಲಸ್ಥಾನ ಎರಡೂ ಕೂಡಾ ಇವತ್ತಿಗೆ ಕತ್ತಲೆಯಲ್ಲಿರುವುದಕ್ಕೆ ಯಾರು ಕಾರಣ?. ಇದರ ಬಗ್ಗೆ ಚರ್ಚೆಯಾಗುವುದಿಲ್ಲ. ಕೋಟಿ ಚೆನ್ನಯರ ಹೆಸರು ವೃತ್ತಕ್ಕೆ, ವಿಮಾನ ನಿಲ್ದಾಣಕ್ಕೆ, ವಿವಿಧ ಸ್ಥಳಗಳಿಗೆ ಇವರ ಹೆಸರನ್ನು ಇಡುವವರಿದ್ದಾರೆ. ಆದರೆ, ಕೋಟಿ ಚೆನ್ನಯರ ಜನ್ಮಸ್ಥಾನ ಕತ್ತಲೆಯಲ್ಲಿದೆ ಎಂದು ಯಾರೂ ಹೇಳುವವರಿಲ್ಲ. ಈ ಪ್ರಶ್ನೆ ಒಂದು ತುಳುನಾಡಿನ ಪರಂಪರೆಗೆ ಒಂದು ಚುಕ್ಕೆ ಎನ್ನುವುದರಲ್ಲಿ ಸಂಶಯ ಇದೆಯಾ?. ಇದು ಒಂದು ವಿಮರ್ಶೆ ಮಾಡುವಂತ ವಿಚಾರ ಅಲ್ಲವೇ?" ಎಂದು ಕೇಳಿದ್ದಾರೆ.
"ಇಷ್ಟೆಲ್ಲಾ ಇರುವಾಗ ಇವತ್ತಿಗೂ ಕೂಡಾ ಕೋಟಿ ಚೆನ್ನಯರ ಜನ್ಮಸ್ಥಾನದ ಬಗ್ಗೆ ಗೊಂದಲ ಏಕೆ?. ಅವರ ಮೂಲಸ್ಥಾನದ ಬಗ್ಗೆ ಗೊಂದಲ ಏಕೆ. ಈ ಗೊಂದಲದ ಹಿಂದಿರುವ ಷಡ್ಯಂತ್ರ, ಸಂಚು ಯಾವುದು. ಈ ವಿಚಾರ ಅರ್ಥ ಆಗಬೇಕು ಎನ್ನುವ ದೃಷ್ಠಿಕೋನದಿಂದ ಈ ಬಗ್ಗೆ ಮಾತನಾಡುತ್ತಿದ್ದೇನೆ. ಇತಿಹಾಸ ಇದೆ. ಚರಿತ್ರೆ ಇದೆ. ಇದನ್ನು ಅಧ್ಯಯನ ಮಾಡುವಂತ ಮೆದುಳಿನ ಜನರು ಇಲ್ಲವೇ?. ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಮಂಗಳೂರು, ಉಡುಪಿಯಲ್ಲಿ ಅಥವಾ ಬೇರೆ ಕಡೆ ಇಲ್ಲವೇ?. ಇದ್ದಾರೆ. ಕೋಟಿ ಚೆನ್ನಯರ ಬಗ್ಗೆ ಬರೆದ ಇತಿಹಾಸಕಾರರು, ಚರಿತ್ರಾಕಾರರು, ಸಾಹಿತಿಗಳಿ ಇದ್ದಾರೆ. ಇವೆರೆಲ್ಲಾ ಏಕೆ ಬಾಯಿ ಮುಚ್ಚಿ ಕೂತಿದ್ದಾರೆ. ಈ ಪ್ರಶ್ನೆ ನನ್ನನ್ನು ದಿನನಿತ್ಯ ಕಾಡುತ್ತಿದೆ" ಎಂದಿದ್ದಾರೆ.
"ಇಂದಿಗೂ ಕೂಡಾ ಕೋಟಿ ಚೆನ್ನಯರ ಜನ್ಮಸ್ಥಾನ, ಮೂಲಸ್ಥಾನ ಕತ್ತಲೆಯಲ್ಲಿದೆ. ಚರಿತ್ರೆಯನ್ನು ಅವಮಾನ ಮಾಡಿದವರು ಯಾರು. ಯಾವ ಕಾರಣಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಇದರ ಹಿಂದಿರುವ ಉದ್ದೇಶವೇನು. ಈ ಬಗ್ಗೆ ಜನರಿಗೆ ತಿಳಿಸುವ ಅಗತ್ಯವಿದೆ. ಯಾವುದೋ ಒಂದು ಕಾರಣಕ್ಕಾಗಿ ಇತಿಹಾಸ ಪುರುಷರನ್ನು ಅವಮಾನಿಸುವುದನ್ನು ನಾನು ಖಂಡಿಸುತ್ತೇನೆ. ಇಂದಿಗೂ ಕೂಡಾ ಕೋಟಿ ಚೆನ್ನಯರ ಜನ್ಮಸ್ಥಾನ ಪಡುಮಲೆ. ನೀವು ಯಾವ ಪುಸ್ತಕವನ್ನೂ ಕೂಡಾ ಓದಿ. ಎಲ್ಲಾ ಪುಸ್ತಕದ ಇತಿಹಾಸದಲ್ಲೂ ಕೋಟಿ ಚೆನ್ನಯರ ಜನ್ಮಸ್ಥಾನ ಪಡುಮಲೆ ಎಂದಿದೆ. ಸತ್ಯ ತಿಳಿದಿದ್ದರೂ ಕೂಡಾ ಸತ್ಯವನ್ನು ಹೇಳುವ ಧೈರ್ಯ ನಮ್ಮಲ್ಲಿ ಏಕಿಲ್ಲ ಎಂದು ಪ್ರಶ್ನಿಸಿದ್ದಾರೆ.
"ಕೋಟಿ ಚೆನ್ನಯರ ಇತಿಹಾಸ ಚರಿತ್ರೆ ಮುಂದಿನ ಪೀಳಿಗೆಗೆ ತಿಳಿಸುವಂತೆ ಮಾಡಬೇಕು. ಕೋಟಿ ಚೆನ್ನಯರನ್ನ ಒಂದು ಜಾತಿಗೆ ಸೀಮಿತಗೊಳಿಸಿದರೆ ಇದು ಅವರಿಗೆ ಅವಮಾನ ಮಾಡಿದಂತಾಗುತ್ತದೆ. ಈ ವಿಚಾರಕ್ಕೂ ಹಾಗೂ ರಾಜಕೀಯಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಕೋಟಿ ಚೆನ್ನಯರ ಹೆಸರಿನಲ್ಲಿ ದುಡ್ಡು ಮಾಡುವಂತ ಹುಚ್ಚು ಕೂಡಾ ನಮಗಿಲ್ಲ" ಎಂದು ತಿಳಿಸಿದ್ದಾರೆ.