ಮಂಗಳೂರು, ಡಿ.10 (DaijiworldNews/PY): ನಗರದ ಎರಡು ಕಡೆಗಳಲ್ಲಿ ಕಾಣಿಸಿಕೊಂಡ ಉಗ್ರರ ಪರ ಗೋಡೆಗ ಬರಹಗಳನ್ನು ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಇಬ್ಬರು ಆರೋಪಿಗಳನ್ನು ಡಿ.9ರ ಬುಧವಾರದಂದು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪೊಲೀಸರ ಮನವಿಯಂತೆ ನ್ಯಾಯಾಲಯವು ಆರೋಪಿಗಳ ಹೆಚ್ಚಿನ ವಿಚಾರಣೆಗಾಗಿ ಹತ್ತು ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಆರೋಪಿಗಳನ್ನು ತೀರ್ಥಹಳ್ಳಿ ನಿವಾಸಿಗಳಾದ ಶಾರೀಕ್ ಹಾಗೂ ಮಾಝ್ ಮುನೀರ್ ಎಂದು ತಿಳಿದುಬಂದಿದೆ. ಇಬ್ಬರು ಆರೋಪಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಪೊಲೀಸರ ಕೈ ಸೇರದ ಕಾರಣ ಅವರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಾಧ್ಯವಾಗಲಿಲ್ಲ.
ಇಬ್ಬರು ಆರೋಪಿಗಳ ಬಳಿ ಇದ್ದ ಮೊಬೈಲ್ ಫೋನ್ ಹಾಗೂ ಮಾಝ್ನ ಬಳಿ ಇದ್ದ ಲಾಪ್ಟಾಪ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಲ್ಲಿರುವ ಡೇಟಾವನ್ನು ರಿಟ್ರೈವ್ ಮಾಡಲು ತಂತ್ರಜ್ಞರಿಗೆ ನೀಡಿದ್ದಾರೆ. ಲಾಪ್ಟಾಪ್ನಲ್ಲಿರುವ ದಾಖಲೆಗಳು ಪೊಲೀಸರ ತನಿಖೆಗೆ ಹೆಚ್ಚಿನ ಬಲ ನೀಡುವ ಸಾಧ್ಯತೆ ಇದೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶಾರೀಕ್ಗೆ ವಿದೇಶದಲ್ಲಿರುವ ಓರ್ವ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ವ್ಯಕ್ತಿಯ ಸಲಹೆಯ ಮೇರೆಗೆ ಗೋಡೆ ಬರಹಗಳನ್ನು ಬರೆದಿದ್ದ ಎನ್ನಲಾಗಿದೆ. ಅಲ್ಲದೇ, ಆ ವ್ಯಕ್ತಿಯೊಂದಿಗೆ ಇಂಟರ್ನೆಟ್ ಕರೆಗಳ ಮೂಲಕ ಸಂವಹನ ನಡೆಸುತ್ತಿದ್ದು, ಈ ಕೃತ್ಯಕ್ಕೆ ನಿರ್ದೇಶನ ನೀಡಿದ ವ್ಯಕ್ತಿ ಹಾಗೂ ಈ ಘಟನೆಯಲ್ಲಿ ಭಾಗಿಯಾದ ಸದಸ್ಯರು ಪುಣೆಯ ವಾಟ್ಸಾಪ್ ಗುಂಪಿನಲ್ಲಿರುವವರು ಎಂಬ ಮಾಹಿತಿಯ ಹಿನ್ನೆಲೆ ಪೊಲೀಸರು ಇನ್ನಷ್ಟು ಹೆಚ್ಚಿನ ತನಿಖೆ ಮಾಡಲು ತೀರ್ಮಾನಿಸಿದ್ದಾರೆ.
ಶಾರೀಕ್ನ ಸಂಬಂಧಿ ತೀರ್ಥಹಳ್ಳಿಯ ಸಾದತ್ನನ್ನು ಕೂಡಾ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಆತನನ್ನು ಕೂಡಾ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈ ಕೃತ್ಯದಲ್ಲಿ ಪಾಲ್ಗೊಳ್ಳಲು ಶಾರೀಕ್ಗೆ ಪ್ರಚೋದನೆ ನೀಡಿದ್ದ. ಹಾಗಾಗಿ ಶಾರೀಕ್, ಮಾಝ್ ಮುನೀರ್ನನ್ನು ಈ ಕೃತ್ಯಕ್ಕೆ ಸೇರಿಸಿಕೊಂಡಿದ್ದ.
ಆರೋಪಿಗಳ ಬಗ್ಗೆ ಪೊಲೀಸರು ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಿದ್ದು, ಮುಂದಿನ ತನಿಖೆಯನ್ನು ಯಾವ ಆಯಾಗಳಲ್ಲಿ ನಡೆಸಬೇಕು ಎನ್ನುವ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಬುಧವಾರ ಕಮಿಷನರ್ ಡಾ.ವಿಕಾಸ್ ಕುಮಾರ್ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಪ್ರಕರಣದ ತನಿಖಾಧಿಕಾರಿ ಎಸಿಪಿ ಜಗನ್ನಾಥ್ ಸೇರಿದಂತೆ ತನಿಖಾ ತಂಡದ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
ತನಿಖಾ ತಂಡವು ಆರೋಪಿಗಳನ್ನು ವಿಚಾರಣೆ ನಡೆಸಿದ ವೇಳೆ ಪ್ರಶ್ನೆಗಳಿಗೆ ಸರಿಯಾಗಿ ಸ್ಪಂದಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಆರೋಪಿಗಳಿಗೆ ಕನ್ನಡ, ಇಂಗ್ಲಿಷ್, ಹಿಂದಿ ಹಾಗೂ ಉರ್ದು ಭಾಷೆ ಚೆನ್ನಾಗಿ ಗೊತ್ತಿದ್ದು, ತಂತ್ರಜ್ಞಾನ ಬಳಕೆಯಲ್ಲಿ ಪರಿಣತರಾಗಿದ್ದಾರೆ.ಅವರ ಹಿನ್ನೆಲೆಯ ಬಗ್ಗೆ ಅಸ್ಪಷ್ಟ ಮಾಹಿತಿ ನೀಡುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಹೆಚ್ಚು ಜನರ ಗಮನ ಸೆಳೆಯುವ ಹಾಗೂ ದೊಡ್ಡ ಪ್ರಚಾರ ಪಡೆಯುವ ಉದ್ದೇಶದಿಂದ ಅವರ ಮಂಗಳೂರನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ತನಿಖೆಯ ವೇಳೆ ಗೊತ್ತಾಗಿದೆ ಎಂದು ತಿಳಿದುಬಂದಿದೆ.
ಒಂದು ವೇಳೆ ತನಿಖೆ ತೀವ್ರಗೊಂಡು ಇನ್ನಷ್ಟು ಮಾಹಿತಿ ಲಭ್ಯವಾದರೆ ರಾಷ್ಟ್ರೀಯ ತನಿಖಾ ತಂಡದಿಂದಲೂ ಕೂಡಾ ಆರೋಪಿಗಳನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಯೋರ್ವರು ಹೇಳಿದ್ದಾರೆ.