ಬಂಟ್ವಾಳ, ಜೂ 14 : ಎರಡು ದಿನಗಳ ಹಿಂದೆ ಬಂಟ್ವಾಳಕ್ಕೆ ಸಮೀಪದ ಬಡ್ಡಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಹಲ್ಲೆಗೈದು, ಹಾಡುಹಗಲೇ ತಲವಾರು ಝಳಪಿಸಿ ಭೀತಿಯ ವಾತಾವರಣ ನಿರ್ಮಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಟ್ವಾಳ ನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಪಂಜಿಕಲ್ಲಿನ ಕಜೆಬೈಲ್ ನಿವಾಸಿ ದೀಪಕ್, ಬಿ.ಸಿ.ರೋಡ್ ಅಗ್ರಬೈಲ್ ನ ಪವನ್, ಬಂಟ್ವಾಳ ನಿವಾಸಿಗಳಾದ ಶೈಲೇಶ್ ಮತ್ತು ರಂಜಿತ್ ಬಂಧಿತರು, ಇನ್ನುಳಿದಂತೆ ಪ್ರಮುಖ ಆರೋಪಿಗಳಾದ ಸುರೇಂದ್ರ ಬಂಟ್ವಾಳ, ತಿಲಕ್, ಮನೋಹರ್, ಪ್ರದೀಪ್, ಸತೀಶ ಎಂಬವರು ಸದ್ಯ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರಿಸಿಸಿದ್ದಾರೆ. ಬಂಧಿತ ಆರೋಪಿಗಳು ಘಟನೆಯ ಬಳಿಕ ಆರೋಪಿಗಳು ತಲೆಮರೆಸಿಕೊಳ್ಳಲು ಹಣಕಾಸು ಸಹಿತ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ಆರೋಪ ಎದುರಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಜೂ 11ರ ಸೋಮವಾರ ಮಧ್ಯಾಹ್ನ ಬಡ್ಡಕಟ್ಟೆಯಲ್ಲಿರುವ ಹೊಟೇಲೊಂದಕ್ಕೆ ಊಟಕ್ಕೆಂದು ತೆರಳಿದ್ದ ಬಿಜೆಪಿ ಕಾರ್ಯಕರ್ತರಾದ ಗಣೇಶ್ ರೈ ಮಾಣಿ ಹಾಗೂ ಪುಷ್ಪರಾಜ್ ಎಂಬವರಿಗೆ ಸುರೇಂದ್ರ ಬಂಟ್ವಾಳ ಮತ್ತಿತರರು ಹಲ್ಲೆಗೈದು, ಕೊಲೆಗೆ ಯತ್ನಿಸಿದ್ದರು. ಸುರೇಂದ್ರ ಬಂಟ್ವಾಳ ನಡುರಸ್ತೆಯಲ್ಲಿ ತಲವಾರು ಝಳಪಿಸಿ ಅವಾಚ್ಯವಾಗಿ ನಿಂದಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.