ಬಂಟ್ವಾಳ, ಡಿ. 10 (DaijiworldNews/SM): ಇಲ್ಲಿನ ಪುರಸಭೆಯ ಹೆಲ್ತ್ ಅಫೀಸರ್ ವಿಟ್ಲ ಪುಣಚ ನಿವಾಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಮೇಲಾಧಿಕಾರಿಗಳ ಮಾನಸಿಕ ಹಿಂಸೆಯಿಂದ ಬೇಸರಗೊಂಡು ಆತ್ಮಹತ್ಯೆ ಮಾಡುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮೇಲಾಧಿಕಾರಿಗಳ ಮಾನಸಿಕ ಹಿಂಸೆಯನ್ನು ತಾಳಲಾರದೆ ಹೆಲ್ತ್ ಆಫಿಸರ್ ಇಂದು ಬೆಳಿಗ್ಗೆ ಪತ್ರ ಬರೆದಿಟ್ಟು ಮೆಲ್ಕಾರ್ ನಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಅವರನ್ನು ರಕ್ಷಣೆ ಮಾಡಿ ಪುತ್ತೂರು ಖಾಸಗಿ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ. ಸುಳ್ಯ ಪುರಸಭೆಯಿಂದ ಕಳೆದ ಐದು ತಿಂಗಳ ಹಿಂದೆಯಷ್ಟೆ ಬಂಟ್ವಾಳ ಪುರಸಭೆಗೆ ಆಗಮಿಸಿದ್ದರು.
ನಮ್ಮ ಕಚೇರಿಯ ಮುಖ್ಯಾಧಿಕಾರಿ ನನಗೆ ದಿನನಿತ್ಯ ಅನಗತ್ಯವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಹಾಗೂ ಕಚೇರಿಯ ಇಕ್ಬಾಲ್ ನನ್ನ ಬಗ್ಗೆ ಅನಗತ್ಯ ಸುಳ್ಳು ಸುದ್ದಿ ಹಬ್ಬುತ್ತಿದ್ದಾನೆ. ನಾನು ಬಂಟ್ವಾಳ ಪುರಸಭೆಗೆ ಸುಮಾರು 5 ತಿಂಗಳ ಹಿಂದೆ ಕರ್ತವ್ಯಕ್ಕೆ ಹಾಜರಾಗಿದ್ದು 2 ತಿಂಗಳ ಕಾಲ ಯಾವುದೇ ಸಮಸ್ಯೆ ಇರಲಿಲ್ಲ. ತದನಂತರ ಇದುವರೆಗೆ ದಿನನಿತ್ಯ ಅನಗತ್ಯ ಬೈಗುಳ ಮಾನಸಿಕ ಹಿಂಸೆಯನ್ನು ಮುಖ್ಯಾಧಿಕಾರಿಗಳು ನೀಡುತ್ತಿದ್ದಾರೆ. ಇದುವರಗೆ ನಾನು ಮುಖ್ಯಾಧಿಕಾರಿಗಳಿಗೆ ಯಾವುದೇ ರೀತಿಯ ಎದುರುತ್ತರ ನೀಡಿರುವುದಿಲ್ಲ ಅವರಿಗೆ ನನ್ನ ಅಮ್ಮನ ಸ್ಥಾನ ನೀಡಿರುತ್ತೇನೆ.
‘ನಾನು ಯಾವುದೇ ರೀತಿಯಲ್ಲಿ ಕಚೇರಿಯ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ಅಥವಾ ಅಸಭ್ಯವಾಗಿ ವರ್ತಿಸಿಲ್ಲ. ಈ ಬಗ್ಗೆ ತಾವುಗಳು ಕಚೇರಿಯ ಸಿಬ್ಬಂದಿಯವರಲ್ಲಿ ಕೇಳಿ ತಿಳಿದುಕೊಳ್ಳಬಹುದು. ನಾನು ಬೇರೆ ಕಚೇರಿಗೆ ಇಲ್ಲಿಂದ ವರ್ಗಾವಣೆ ಮಾಡಿ ಹೋಗುವುದಕ್ಕೂ ಮುಖ್ಯಾಧಿಕಾರಿಗಳು ತೊಂದರೆಯನ್ನು ನೀಡುತ್ತಿದ್ದಾರೆ. ನಾನು ಬಹಳ ತಾಳ್ಮೆಯಿಂದ ಅವರಲ್ಲಿ ಹೇಳಿದರು ಅವರು ನನಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ. ಅದುದರಿಂದ ನಾನು ಕೊನೆಗೂ ತಾಳ್ಮೆ ಸಹಿಸಲಾರದೆ ಆತ್ಮಹತ್ಯೆ ಮಾಡುತ್ತಿದ್ದೇನೆ. `ದಯವಿಟ್ಟು ಕ್ಷಮಿಸಿ’ ಎಂಬುವುದಾಗಿ ಪತ್ರದಲ್ಲಿ ಬರೆಯಲಾಗಿದೆ.