ಮಂಗಳೂರು, ಡಿ.11 (DaijiworldNews/MB) : ಕ್ರಿಸ್ಮಸ್ನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ವರ್ಷದ ಕ್ರಿಸ್ಮಸ್ನ್ನು 'ಹಸಿರು ಕ್ರಿಸ್ಮಸ್' ಆಗಿ ಆಚರಿಸಲು ನಗರ ಸಿದ್ದವಾಗಿದೆ. ಈ ಬಾರಿಯ ಕ್ರಿಸ್ಮಸ್ನ್ನು ಟ್ರೀಗೆ ಅಲಂಕಾರ ಮಾಡಲು ಬಳಸುವ ಸ್ನೋಮೆನ್, ಸಾಂತಾಕ್ಲಾಸ್, ಗಂಟೆಗಳು, ನಕ್ಷತ್ರಗಳು ಮುಂತಾದ ಅಲಂಕಾರಿಕ ವಸ್ತುಗಳನ್ನು ಕಾಗದದಿಂದ ತಯಾರಿಸುವ ಮೂಲಕ ಪರಿಸರ ಸ್ನೇಹಿ ಕ್ರಿಸ್ಮಸ್ ಆಚರಣೆಗೆ ನಗರ ಸಜ್ಜಾಗಿದೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಪರಿಸರ ಸ್ನೇಹಿ ನಿತಿನ್ ವಾಸ್, ''ಕಳೆದ ವರ್ಷ ಇಂತಹ ಪ್ರಯತ್ನವನ್ನು ಸಣ್ಣ ಪ್ರಮಾಣದಲ್ಲಿ ಮಾಡಲಾಗಿತ್ತು. ಆದರೆ ಸಿಎಎ ವಿರೋಧಿ ಪ್ರತಿಭಟನೆ ಮತ್ತು ಇತರ ವಿಷಯಗಳಿಂದಾಗಿ ರಚಿಸಲಾದ ವಸ್ತುಗಳನ್ನು ಸಂಪೂರ್ಣವಾಗಿ ಮಾರಾಟ ಮಾಡಲು ಸಾಧ್ಯವಾಗಲಿಲ್ಲ'' ಎಂದು ಹೇಳಿದರು.
''ಈ ವರ್ಷ ನಾವು ಹೆಚ್ಚಿನ ಪ್ರಯತ್ನ ಮಾಡಿದ್ದು ಮರುಬಳಕೆ ಮಾಡಬಹುದಾದ ಕಾಗದದಿಂದ ಗಂಟೆಗಳು, ಸಾಂತಾಕ್ಲಾಸ್, ನಕ್ಷತ್ರಗಳು ಇತ್ಯಾದಿಗಳನ್ನು ಸಿದ್ದಪಡಿಸಿದ್ದೇವೆ. ರೀನಾ ಡಿಸೋಜಾ ನೇತೃತ್ವದ ಎಂಟು ಮಹಿಳೆಯರ ತಂಡವು ಈ ಕಾರ್ಯದಲ್ಲಿ ನಿರತವಾಗಿದೆ" ಎಂದು ತಿಳಿಸಿದರು.
''ಪರಿಸರದ ಬಗೆಗಿನ ಕಾಳಜಿಯು ಎಲ್ಲಾ ಹಬ್ಬಗಳನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಸಹಕಾರ ನೀಡಿದೆ. ಸ್ವಾತಂತ್ರ್ಯ ದಿನಾಚರಣೆ, ಗಣೇಶ ಚತುರ್ಥಿ ಮತ್ತು ರಕ್ಷಾ ಬಂಧನ ಹಬ್ಬದಂದೂ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ರಿಸ್ಮಸ್ ಸಂದರ್ಭದಲ್ಲೂ ಅದೇ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ'' ಎಂದರು.