ಮಂಗಳೂರು, ಡಿ.11 (DaijiworldNews/MB) : ನಗರದ ಕೋರ್ಟ್ ಸಮೀಪ ಹಾಗೂ ಬಿಜೈನ ಅಪಾರ್ಟ್ಮೆಂಟ್ ಗೋಡೆ ಮೇಲೆ ಪ್ರಚೋದನಕಾರಿ ಗೋಡೆ ಬರಹ ಬರೆದ ಪ್ರಕರಣವು ಹಲವು ದಿಕ್ಕುಗಳಲ್ಲಿ ಸಾಗುತ್ತಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಇಬ್ಬರು ಆರೋಪಿಗಳ ಮೊಬೈಲ್ ಫೋನ್ ಮತ್ತು ಲ್ಯಾಪ್ಟಾಪ್ಗಳಲ್ಲಿ ಭಯೋತ್ಪಾದನೆಯನ್ನು ಹರಡುತ್ತಿರುವ ಕೆಲವು ಕುಖ್ಯಾತ ವ್ಯಕ್ತಿಗಳ ವಿಡಿಯೋ ತುಣುಕುಗಳು ಮತ್ತು ಇತರ ಸಾಹಿತ್ಯಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.

ಈ ಪ್ರಕರಣವು ಈಗ ಹೆಚ್ಚು ಗಂಭೀರವಾಗಿರುವ ಹಿನ್ನೆಲೆ ಪೊಲೀಸರು ತಮ್ಮ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿರುವ ತೀರ್ಥಹಳ್ಳಿಯ ಎಂಜಿನಿಯರಿಂಗ್ ವಿದ್ಯಾರ್ಥಿ ಮಾಜ್ ಮುನೀರ್ ಅಹಮದ್ ಈ ದುಷ್ಕೃತ್ಯದ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದೆ. ಅವನು ಈ ಎಲ್ಲಾ ಯೋಜನೆಗಳನ್ನು ರೂಪಿಸಿದ್ದನು ಎನ್ನಲಾಗಿದೆ. ಮತ್ತೋರ್ವ ಆರೋಪಿಯಾದ ಮೊಹಮ್ಮದ್ ಶಾರಿಕ್ ಈ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದ ಎಂದು ತಿಳಿದು ಬಂದಿದೆ.
ಮೊಬೈಲ್ ಫೋನ್ ಮತ್ತು ಲ್ಯಾಪ್ಟಾಪ್ಗಳಲ್ಲಿ ಉಗ್ರ ಸಾಹಿತ್ಯಗಳು ದೊರೆತ ವಿಚಾರದ ಹೊರತಾಗಿ, ವಿವಿಧ ಧರ್ಮಗಳಿಗೆ ಸಂಬಂಧಿಸಿದ ಸುಮಾರು 150 ಪುಸ್ತಕಗಳು ಆರೋಪಿಗಳ ವಶದಲ್ಲಿವೆ. ಪುಸ್ತಕಗಳು ಇಸ್ಲಾಂ, ಹಿಂದೂ ಧರ್ಮ, ಕ್ರಿಶ್ಚಿಯನ್ ಧರ್ಮ, ಬೌದ್ಧಧರ್ಮ ಇತ್ಯಾದಿಗಳಿಗೆ ಸೇರಿದ್ದಾಗಿದೆ. ಇದಲ್ಲದೆ, ಐಸಿಸ್ಗಾಗಿ ಕೆಲಸ ಮಾಡುವ ಜಾಗತಿಕ ಭಯೋತ್ಪಾದಕನೆಂದು ಘೋಷಿಸಲ್ಪಟ್ಟ ಜಮೈಕಾದ ಶೇಖ್ ಅಬ್ದುಲ್ಲಾ ಫೈಸಲ್ನ ವೀಡಿಯೊಗಳು ಕಂಡುಬಂದಿವೆ ಎನ್ನಲಾಗಿದೆ.
ಆರೋಪಿಗಳಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧವಿದೆ ಎಂಬ ಅನುಮಾನಕ್ಕೆ ಇದು ಕಾರಣವಾಗಿದೆ. ಅವರಿಗೆ ದೊರೆತ ಆರ್ಥಿಕ ನೆರವು ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.