ಮಂಗಳೂರು, ಡಿ.11 (DaijiworldNews/PY): ಮಂಗಳೂರು-ಮುಂಬೈ ನಡುವಿನ ಮತ್ಸ್ಯಗಂಧ ರೈಲು ಡಿ.17ರಂದು ಸಂಚಾರ ಆರಂಭಿಸಲಿದೆ. ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದ ರೈಲಿನ ಸಂಚಾರ ಪುನರಾರಂಭಕ್ಕೆ ರೈಲ್ವೆ ಮಂಡಳಿ ಒಪ್ಪಿಗೆ ಸೂಚಿಸಿದೆ.

ಸಾಂದರ್ಭಿಕ ಚಿತ್ರ
ಮಂಗಳೂರು - ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್ ರೈಲು ಪ್ರಾರಂಭಿಸಲು ರೈಲ್ವೆ ಮಂಡಳಿ ಅನುಮತಿ ನೀಡಿರುವುದರಿಂದ, ದಕ್ಷಿಣ ರೈಲ್ವೆ, 15 ದಿನಗಳ ಕಾಲ ಉತ್ಸವ ರೈಲು ರೂಪದಲ್ಲಿ ರೈಲು ಚಲಾಯಿಸಲು ನಿರ್ಧರಿಸಿದೆ.
ನಂ. 02620 ಮಂಗಳೂರು ಸೆಂಟ್ರಲ್ - ಎಲ್ಟಿಟಿ ರೈಲು ಮತ್ತು ನಂ. 02619 ಎಲ್ಟಿಟಿ - ಮಂಗಳೂರು ಸೆಂಟ್ರಲ್ ರೈಲು ಡಿಸೆಂಬರ್ 17 ರಿಂದ 31ರವರೆಗೆ ಚಲಿಸಲಿದೆ. ಎರಡೂ ರೈಲುಗಳು ತಲಾ 15 ಟ್ರಿಪ್ಗಳನ್ನು ಕೈಗೊಳ್ಳಲಿವೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.
02620ರ ರೈಲು ಮಧ್ಯಾಹ್ನ 2.25 ಕ್ಕೆ ಸೆಂಟ್ರಲ್ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 6.35 ಕ್ಕೆ ಎಲ್ಟಿಟಿಯನ್ನು ತಲುಪುತ್ತದೆ. ರೈಲು ನಂ. 02619 ಮಧ್ಯಾಹ್ನ 3.20 ಕ್ಕೆ ಎಲ್ಟಿಟಿಯಿಂದ ಹೊರಟು ಬೆಳಿಗ್ಗೆ 7.30 ಕ್ಕೆ ಮಂಗಳೂರು ಸೆಂಟ್ರಲ್ಗೆ ತಲುಪಲಿದೆ. ಈ ರೈಲು ಸುರತ್ಕಲ್, ಮುಲ್ಕಿ, ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲ, ಕಾರವಾರ, ಮಡಗಾಂವ್, ಕುಡಾಳ್, ರತ್ನಗಿರಿ, ಚಿಪ್ಲುನ್, ಖೇಡ್, ಮನಗಾಂವ್ ಹಾಗೂ ಪನ್ವೆಲ್ ಥಾಣೆಗಳನ್ನು ನಿಲುಗಡೆ ಹೊಂದಿದೆ.