ಮಂಗಳೂರು, ಡಿ.11 (DaijiworldNews/PY): ಮಲೆನಾಡಿನಲ್ಲಿ ಹುಟ್ಟಿ ಹರಿಯುವ ಹಲವು ನದಿಗಳಲ್ಲಿರುವ ಅಪರೂಪದ ಮೀನು ವೈವಿಧ್ಯತೆ ಇರುವ ಸ್ಥಳಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಮೀನುಗಾರಿಕೆ ಕಾಯ್ದೆಯಡಿಯಲ್ಲಿ ಮತ್ಸ್ಯಧಾಮ ಎಂದು ಘೋಷಿಸಬೇಕು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ.

ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಭೇಟಿ ಮಾಡಿ ಶಿಫಾರಸ್ಸು ವಿವರ ನೀಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಸಚಿವರು, "ಮತ್ಸ್ಯಧಾಮಗಳ ಮೂಲಕ ಅಪರೂಪದ ಮೀನು ಸಂತತಿ ಸಂರಕ್ಷಣೆ ಸಾಧ್ಯವಾಗಿದ್ದು,ಇದು ಸಂತಸದ ಸಂಗತಿ. ಇನ್ನಷ್ಟು ಸ್ಥಳಗಳ ಬಗ್ಗೆ ಶಿಫಾರಸ್ಸು ಮಾಡಿರುವ ಜೀವವೈವಿಧ್ಯ ಮಂಡಳಿಗೆ ಅಭಿನಂದನೆ ಹೇಳುತ್ತೇನೆ. ಮೀನುಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಹೊಸ ಮತ್ಸ್ಯಧಾಮಗಳ ಘೋಷಣೆ ಆಗುವಂತೆ ಕ್ರಮ ಕೈಗೊಳ್ಳುತ್ತೇನೆ" ಎಂದರು.
"ಶಿಫಾರಸ್ಸು ವಿವರದಂತೆ 2009ರಲ್ಲಿ 11 ಸ್ಥಳಗಳನ್ನು ಗುರುತಿಸಿ ಮತ್ಸ್ಯಧಾಮ ಎಂದು ಘೋಷಿಸಲಾಗಿದೆ. ನದಿ, ಹಳ್ಳಗಳಲ್ಲಿ ವಿನಾಶದ ಅಂಚಿನ ಮತ್ಸ್ಯ ಸಂತತಿ ಸಂರಕ್ಷಣೆಗೆ ಇದು ಸಹಾಯಕವಾಗಿದೆ. ಸ್ಥಳೀಯ ಧಾರ್ಮಿಕ ಸಂಸ್ಥೆ, ಜನತೆಯ ಸಹಕಾರದಿಂದ ಮತ್ಸ್ಯಧಾಮಗಳು, ವನ್ಯ ವೈವಿಧ್ಯ ತಾಣಗಳ ಸಂರಕ್ಷಣೆ ಸಾಧ್ಯವಾಗಿದೆ. ಇನ್ನೂ 15 ಸ್ಥಳಗಳನ್ನು ಗುರುತಿಸಲಾಗಿದ್ದು ಮತ್ಸ್ಯಧಾಮ ಘೋಷಣೆ ಮಾಡಲು ಹೇಳಲಾಗಿದೆ. ಈ ಬಗ್ಗೆ ತಳಮಟ್ಟದ ಮಾಹಿತಿ ಪಡೆಯಲಾಗಿದೆ. ತಜ್ಞರು, ಮಿನುಗಾರಿಕಾ ಇಲಾಖೆ ನಿರ್ದೇಶಕರು, ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ" ಎಂದು ತಿಳಿಸಿದರು.
"ದಕ್ಷಿಣಕನ್ನಡ ಜಿಲ್ಲೆಯ 8, ಉಡುಪಿಯ 1, ಉತ್ತರಕನ್ನಡ ಜಿಲ್ಲೆಯ 1, ಕೊಡಗುಜಿಲ್ಲೆಯ 2, ಮಂಡ್ಯ ಜಿಲ್ಲೆಯ 2, ಕಲಬುರ್ಗಿಯ 1 ಸ್ಥಳವನ್ನು ಮತ್ಸ್ಯಧಾಮ ಎಂದು ಗುರುತಿಸಲಾಗಿದೆ. (ರಂಗನತಿಟ್ಟು, ಶಿಶಿಲ, ಕುಶಾಲನಗರ, ಸೀತಾನದಿ, ರಾಮನಗುಳಿ, ಅಡ್ಡಹೊಳೆ, ಪಾಕ ಮುಂತಾದ ಸ್ಥಳಗಳು) ಈಗಾಗಲೇ ಶೃಂಗೇರಿ, ತೋಡಿಕಾನ, ಶಿವನ ಸಮುದ್ರ, ಹರಿಹರಪುರ, ತಿಂಗಳೆ, ರಾಮನಾತಪುರ ಮುಂತಾದ 11 ಸ್ಥಳಗಳಲ್ಲಿ ಮತ್ಸ್ಯಧಾಮ ಘೋಷಣೆ ಆಗಿದೆ" ಎಂದರು.
"ದೇಶದಲ್ಲಿ ಈ ರೀತಿ ಮತ್ಸ್ಯಧಾಮ ಘೊಷಣೆ ಮಾಡಿರುವ ಮೊದಲ ರಾಜ್ಯ ಕರ್ನಾಟಕ (2009) ಎಂಬ ಹೆಗ್ಗಳಿಕೆ ಇದೆ" ಎಂದು ಜೀವ ವೈವಿಧ್ಯಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾಹಿತಿ ನೀಡಿದರು.
ಮತ್ಸ್ಯ ಧಾಮಗಳಲ್ಲಿರುವ ಅಪರೂಪದ ಮೀನು ಜಾತಿಯ ಹೆಸರು: ಮಹಶೀರ್, ಹರಗಿ (ಹುಲ್ಲುಗೆಂಡೆ), ಪರ್ಲಸ್ಪಾಟ್, ಪಪ್ಫರ್, ಸಾಲ್ಮೊಸ್ಟೋಮ್, ಗಾರ್, ಬೆರಿಲ್, ಸೆಟ್ನಾಯಿ ಬಾರ್ಬ, ಪುಂಟಿಯಸ್, ಡೇನಿಯೊ, ಗ್ಲಾಸ್ ಫಿಶ್, ಕಿಲ್ಲಿ ಫಿಶ್.