ಮಂಗಳೂರು, ಜೂ 14: ಕಾಂಗ್ರೆಸ್ ಮುಖಂಡನೆಂದು ಬಿಂಬಿಸಿಕೊಂಡಿರುವ ಸುರೇಂದ್ರ ಬಂಟ್ವಾಳ್, ತಲ್ವಾರ್ ಝಳಪಿಸಿದ ಪ್ರಕರಣದಲ್ಲಿ ನನ್ನ ಹೆಸರನ್ನು ವಿನಾ ಕಾರಣ ದುರ್ಬಳಕೆ ಮಾಡಲಾಗಿದೆ. ತಲ್ವಾರ್ ಹಿಡಿದು ಹಲ್ಲೆ ಮಾಡಿದ ಸುರೇಂದ್ರ ಬಂಟ್ವಾಳ್ ನನ್ನ ಬಂಟನಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಸ್ಪಷ್ಟ ಪಡಿಸಿದ್ದಾರೆ. ಈ ಪ್ರಕರಣದಲ್ಲಿ ನನ್ನ ಹೆಸರನ್ನು ಬಿಜೆಪಿಯರು ಅಪಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.
ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಜೂ.14 ರ ಗುರುವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು,ಸುಖಾಸುಮ್ಮನೇ ನನ್ನ ವಿರುದ್ಧ ಷಡ್ಯಂತ್ರ ಹೆಣೆಯಲಾಗಿದೆ. ಇದರ ಹಿಂದೆ ಕೆಲವೊಂದು ವ್ಯಕ್ತಿಗಳ ಕುತಂತ್ರ ಇದೆ ಎಂದು ಆರೋಪಿಸಿದರು. ಕಾಂಗ್ರೆಸ್ ನ ಸೋಲಿಗೆ ಬಿಜೆಪಿಯವರು ನಡೆಸಿದ ಅಪಪ್ರಚಾರ ಕಾರಣ . ನಾನು ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕವೂ , ನನ್ನ ಹೆಸರನ್ನು ಪದೇ ಪದೇ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದ್ರೆ ಸತ್ಯ ಅರಿತು ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ.ಕಲ್ಲಡ್ಕ ಬಿಸಿಯೂಟ ಸ್ಥಗಿತಗೊಳಿಸಿದ ಹಾಗೂ ಶರತ್ ಮಡಿವಾಳ ಪ್ರಕರಣಗಳಲ್ಲೂ ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳಲಾಯಿತು. ಈಗ ಸುರೇಂದ್ರ ಬಂಟ್ವಾಳ್ ಪ್ರಕರಣದಲ್ಲೂ ಅಪಪ್ರಚಾರ ಮಾಡಲಾಗುತ್ತಿದೆ. ನನಗೇ ಸಂಬಂಧವಿಲ್ಲದ ವ್ಯಕ್ತಿಗಳು ಮಾಡಿದ ಕೃತ್ಯಗಳನ್ನು ನನಗೆ ತಳಕು ಹಾಕಲಾಗುತ್ತಿದೆ ಎಂದು ರಮಾನಾಥ ರೈ ಆರೋಪಿಸಿದರು.
ಶೀಘ್ರದಲ್ಲೇ ಲೋಕಸಭಾ ಚುನಾವಣೆಗಳು ಬರುತ್ತಿದ್ದು, ನಾವು ಚುನಾವಣೆಗೆ ಎಲ್ಲಾ ತಯಾರಿ ನಡೆಸುತ್ತಿದ್ದೇವೆ. ಚುನಾವಣೆಯಲ್ಲಿ ಉತ್ತರ ಕೊಡುವ ಕಾಲ ಸನ್ನಿಹಿತವಾಗಿದೆ. ದೇಶದಲ್ಲಿ ಮಗದೊಮ್ಮೆ ಕಾಂಗ್ರೆಸ್ ಪುನರುತ್ಥಾನಗೊಳ್ಳಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಮೇಯರ್ ಭಾಸ್ಕರ ಮೊಯ್ಲಿ, ಮುಡಾ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕಣಚೂರು ಮೋನು, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ ಮತ್ತಿತರರಿದ್ದರು.