ಉಡುಪಿ, ಡಿ.12 (DaijiworldNews/PY): "ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧ ಮಾಡುವ ಪ್ರಯತ್ನ ಬರಿ ಹಗಲುಗನಸು. ಪ್ರತಿ ಈಡಿ ದಾಳಿಯ ಸೂತ್ರಧಾರಿ ದೇಶದ ಗೃಹ ಸಚಿವರು. ಆದರೆ ಒಬ್ಬನೇ ಒಬ್ಬ ಕಾರ್ಯಕರ್ತನನ್ನು ಹೋರಾಟದಿಂದ ಹಿಂದೆ ಸರಿಸಲು ಸಾಧ್ಯವಿಲ್ಲ. ನಮ್ಮ ಹೋರಾಟ ಕೇವಲ ಈಡಿ ವಿರುದ್ಧ ಮಾತ್ರವಲ್ಲ, ಮನುವಾದದ ವಿರುದ್ಧ, ಸರ್ವಾಧಿಕಾರಿ ವಿರುದ್ಧ" ಎಂದು ಪಿಎಫ್ಐ ರಾಜ್ಯ ಸಮಿತಿಯ ಸದಸ್ಯ ಎ ಕೆ ಅಶ್ರಫ್ ಉಡುಪಿಯಲ್ಲಿ ಕೇಂದ್ರ ಗೃಹ ಸಚಿವರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.








ಅವರು ಶುಕ್ರವಾರ ಅಜ್ಜರಕಾಡಿನಲ್ಲಿರುವ ಹುತಾತ್ಮರ ಸ್ಮಾರಕದ ಎದುರು ಪ್ರತಿಭಟಿಸಿ ಸರಕಾರ ಈಡಿ ಹಾಗೂ ಇತರ ಏಜೆನ್ಸಿಗಳನ್ನು ಪಾಪ್ಯುಲರ್ ಫ್ರಂಟ್ ವಿರುದ್ಧ ಅಸ್ತ್ರವಾಗಿ ದುರ್ಬಳಕೆ ಮಾಡುವುದನ್ನು ಖಂಡಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಬೆಂಬಲಿಸಿದರು.
"ನಾವು ಹೆದರಲು ಸಾವರ್ಕರ್ ಸಂತತಿಗಳಲ್ಲಿ ಸೇರಿದವರಲ್ಲ. ಈ ರೀತಿಯ ದಾಳಿಯಿಂದ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಸತ್ಯ ಯಾವಾಗಲೂ ವಿಜಯ ಸಾಧಿಸುತ್ತದೆ" ಎಂದರು.
"ಕೇಂದ್ರ ಸರ್ಕಾರ ಆಡಳಿತದ ಸಂತೃಪ್ತಿಗಾಗಿ ರೈತ ವಿರೋಧಿ ಕಾಯ್ದೆ ತರಲು ಮುಂದಾಗಿದೆ. ದೇಶದ ಜನತೆಯನ್ನು ಧರ್ಮ, ಜಾತಿ ಆಧಾರದಲ್ಲಿ ಒಡೆಯಲು ಎನ್ ಆರ್ ಸಿ, ಸಿ ಎಎ ಕಾಯ್ದೆ ತಂದರು. ಜನ ವಿರೋದಿ ಕಾಯ್ದೆ ಮುಖಾಂತರ ಅಲ್ಪ ಸಂಖ್ಯಾತರನ್ನು ಎದುರು ಹಾಕಿಕೊಂಡಿದ್ದೀರಿ. ಮುಂದೆ ಹಿಂದುಳಿದವರನ್ನು, ಶೋಷಿತರನ್ನು, ಮಹಿಳೆಯರನ್ನು, ರೈತಾಪಿ ವರ್ಗದವರನ್ನು ಎದುರು ಹಾಕಿಕೊಂಡರೆ ಈಜಿಪ್ಟ್ ನ ಸರ್ವಾಧಿಕಾರಿ ಹೊಸ್ನಿ ಮುಬಾರಕ್ಗೆ ಬಂದ ಪರಿಸ್ಥಿತಿಯಂತೆ ಪ್ರಧಾನಿ ನರೇಂದ್ರ ಮೋದಿಗೂ ಬರುವ ದಿನ ಬಹಳ ದೂರವಿಲ್ಲ" ಎಂದು ಹೇಳಿದರು.
"ಈಡಿ ಅಧಿಕಾರಿಗಳಿಗೆ ವೃತ್ತಿ ಧರ್ಮ ಮನಸ್ಸಿನಲ್ಲಿ ಇರಬೇಕು. ಆಡಳಿತ ವ್ಯವಸ್ಥೆಯ ಗುಲಾಮರಲ್ಲ. ಮೋದಿಯ ಅಥವಾ ಅಮಿತ್ ಷಾ ಅವರ ಗುಲಾಮರಲ್ಲ. ನಿಮ್ಮ ಪ್ರತಿಜ್ಞೆಯಂತೆ ಹೋರಾಡಬೇಕಿದೆ. ಸೇವೆ ಮಾಡಬೇಕಿದ್ದರೆ ಹೇಮಂತ್ ಕರ್ಕರೆಯಂತೆ ಕೆಚ್ಚೆದೆಯಿಂದ ಹೋರಾಡಿ. ಅದು ಸಾಧ್ಯವಾಗದಿದ್ದರೆ ದ.ಕ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಶಶಿಕಾಂತ್ ಸಿಂಥಿಲ್ ಅವರಂತೆ ರಾಜೀನಾಮೆ ಕೊಟ್ಟು ಬೀದಿಗಿಳಿದು ಹೋರಾಟ ಮಾಡಿ" ಎಂದು ಈಡಿ ಅಧಿಕಾರಿಗಳಿಗೆ ಸವಾಲೆಸೆದರು.
ಆರ್ಎಸ್ಎಸ್ ಮತ್ತು ಬಿಜೆಪಿಯ ಹಿತಾಸಕ್ತಿಯ ಪರವಾಗಿ ಕೆಲಸ ಮಾಡುತ್ತಿರುವ ದೊಡ್ಡ ಕಾರ್ಪೊರೇಟ್ಗಳು, ರಾಜಕೀಯ ಗುಂಪುಗಳು ಮತ್ತು ಎನ್.ಜಿ.ಒಗಳನ್ನು ಈಡಿ ಮುಟ್ಟಲೂ ಭಯಪಡುತ್ತಿದೆ. ಬಿಜೆಪಿ ಪಕ್ಷವು ಎಲೆಕ್ಟೋರಲ್ ಬಾಂಡ್ ನೆಪದಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಶೇಖರಿಸಿಟ್ಟಿದ್ದು, ಸ್ವತಂತ್ರ ಏಜೆನ್ಸಿಯೆಂದು ಕರೆದುಕೊಳ್ಳುವ ಈಡಿ ಆ ಪಕ್ಷದ ವಿರುದ್ಧ ದಾಳಿ, ತನಿಖೆ ಅಥವಾ ಕ್ರಮವನ್ನು ಕೈಗೊಳ್ಳದಿರುವುದು ಅದರ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆಯನ್ನು ಮೂಡಿಸಿದೆ" ಎಂದರು.
"ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಸರಕಾರವನ್ನು ವಿರೋಧಿಸುವ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಂಘಟನೆಗಳ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಇತರ ಸರಕಾರಿ ಏಜೆನ್ಸಿಗಳನ್ನು ವ್ಯಾಪಕವಾಗಿ ದುರ್ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ. ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ಪಾಪ್ಯುಲರ್ ಫ್ರಂಟ್ ನಾಯಕರ ನಿವಾಸಗಳು ಮತ್ತು ಕಚೇರಿಗಳ ಮೇಲೆ ಇಡಿ ನಡೆಸಿರುವ ದಾಳಿಗಳೂ ಇದರ ಮುಂದುವರಿದ ಭಾಗವೆಂಬುದು ಸ್ಪಷ್ಟವಾಗಿದೆ. ಈ ದಾಳಿ ಮತ್ತು ಶೋಧನೆಗಳು ಏಜೆನ್ಸಿಯು ಸ್ವತಂತ್ರವಾಗಿ ಕಾರ್ಯಾಚರಿಸುತ್ತಿಲ್ಲ. ಬದಲಾಗಿ ಬಿಜೆಪಿಯ ಅಸ್ತ್ರವಾಗಿ ಕಾರ್ಯಾಚರಿಸುತ್ತಿದೆ ಎನ್ನುವುದನ್ನು ತೋರಿಸುತ್ತಿದೆ" ಎಂದು ತಿಳಿಸಿದರು.
"ಬಿಜೆಪಿಯ ಜನವಿರೋಧಿ ಸಿದ್ಧಾಂತದ ವಿರುದ್ಧ ರಾಜಿಯಿಲ್ಲದ ನಿಲುವು ಹೊಂದಿರುವ ಕಾರಣಕ್ಕಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಬೇಟೆಯಾಡಲಾಗುತ್ತಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಮುಸ್ಲಿಮರು ಸೇರಿದಂತೆ ಮೂಲೆಗೆ ತಳ್ಳಲ್ಪಟ್ಟ ಎಲ್ಲಾ ಸಮುದಾಯಗಳ ಸಬಲೀಕರಣಕ್ಕಾಗಿ ದುಡಿಯುವ ಸಂಘಟನೆಯಾಗಿದೆ" ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದ ಈಡಿ ಅತ್ಯಂತ ಕನಿಷ್ಠ ಹಣಕಾಸಿನ ಮೂಲ ಮತ್ತು ವ್ಯವಹಾರಗಳನ್ನು ಹೊಂದಿರುವ ಗುಂಪುಗಳ ಹಿಂದೆ ಓಡುತ್ತಿದೆ. ಆರಸ್ಸೆಸ್ ಮತ್ತು ಬಿಜೆಪಿಯ ಹಿತಾಸಕ್ತಿಯ ಪರವಾಗಿ ಕೆಲಸ ಮಾಡುತ್ತಿರುವ ದೊಡ್ಡ ಕಾರ್ಪೊರೇಟ್ ಗಳು, ರಾಜಕೀಯ ಗುಂಪುಗಳು ಮತ್ತು ಎನ್.ಜಿ.ಒಗಳನ್ನು ಈಡಿ ಮುಟ್ಟಲೂ ಭಯಪಡುತ್ತಿದೆ. ಬಿಜೆಪಿ ಪಕ್ಷವು ಎಲೆಕ್ಟೋರಲ್ ಬಾಂಡ್ ನೆಪದಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಶೇಖರಿಸಿಟ್ಟಿದ್ದು, ಸ್ವತಂತ್ರ ಏಜೆನ್ಸಿಯೆಂದು ಕರೆದುಕೊಳ್ಳುವ ಈಡಿ ಆ ಪಕ್ಷದ ವಿರುದ್ಧ ದಾಳಿ, ತನಿಖೆ ಅಥವಾ ಕ್ರಮವನ್ನು ಕೈಗೊಳ್ಳದಿರುವುದು ಅದರ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆಯನ್ನು ಮೂಡಿಸಿದೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್ , ಫಯಾಜ್ ಅಹ್ಮದ್, ಜಿಲ್ಲಾಕಾರ್ಯದರ್ಶಿ, ಆಸೀಫ್ ಕೋಟೇಶ್ವರ್, ಬಶೀರ್ ಅಂಬಾಗಿಲು, ಉಡುುಪಿ ವಿಭಾಗದ ಅಧ್ಯಕ್ಷ, ಮೊಹ್ಮದ್ ಶಫೀಕ್ ಮುಂತಾದವರು ಪಾಲ್ಗೊಂಡಿದ್ದರು.