ಮಂಗಳೂರು, ಜೂ 14: ಗೌರಿ ಲಂಕೇಶ್ ಹತ್ಯೆ ನಡೆಸಿದ ಹಂತಕರ ಬಂಧನದ ಬೆನ್ನಲ್ಲೇ, ವಿಚಾರವಾದಿ ಪ್ರೋ. ನರೇಂದ್ರ ನಾಯಕ್ ಹತ್ಯೆಗೆ ಸ್ಕೆಚ್ ಹಾಕಲಾಗಿದೆಯಾ ಎನ್ನುವ ಆತಂಕ ಕಾಡಲಾರಂಭಿಸಿದೆ. ಕಾರಣ ಜೂನ್ 12 ರಂದು ಆಗಂತುಕನೊಬ್ಬ ಪ್ರೋ. ನರೇಂದ್ರ ನಾಯಕ್ ಅವರು ವಾಸಿಸುವ ಮಂಗಳೂರಿನ ಹ್ಯಾಟ್ ಹಿಲ್ ನಲ್ಲಿರುವ ನೋಯಲ್ ಪಾರ್ಕ್ ಫ್ಲಾಟ್ ಗೆ ಬಂದು ನರೇಂದ್ರ ನಾಯಕ್ ಬಗ್ಗೆ ವಿಚಾರಿಸಿದ್ದ ಎನ್ನಲಾಗಿದೆ.
ಅಗಂತುಕ ವ್ಯಕ್ತಿಯ ನಡವಳಿಕೆ ಬಗ್ಗೆ ಪ್ಲ್ಯಾಟ್ ನ ವಾಚ್ ಮ್ಯಾನ್ ಅನುಮಾನಗೊಂಡು ಮರು ಪ್ರಶ್ನೆ ಹಾಕಿದ ಕೂಡಲೇ ಉತ್ತರಿಸಲಾಗದ ಆ ಅಪರಿಚಿತ ವ್ಯಕ್ತಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ತಕ್ಷಣ ಆತನನ್ನು ಹಿಂಬಾಲಿಸಲು ಪ್ರಯತ್ನಿಸಿದರೂ ಆತನನ್ನು ಹಿಡಿಯಲು ಸಾಧ್ಯವಾಗಿಲ್ಲ. ಇವೆಲ್ಲವೂ ಘಟಾನಾವಳಿಗಳೂ ಅಪಾರ್ಟ್ ಮೆಂಟ್ ನ ಸಿಸಿಟಿವಿಯಲ್ಲಿ ದಾಖಲಾಗಿದೆ.
ಈ ಹಿಂದೆ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂದು ಪ್ರೋ. ನರೇಂದ್ರ ನಾಯಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಪೊಲೀಸ್ ಇಲಾಖೆ ಇಬ್ಬರು ಗನ್ ಮ್ಯಾನ್ ಒದಗಿಸಿ ಬಳಿಕ ಒಬ್ಬ ಗನ್ ಮ್ಯಾನ್ ನನ್ನು ಇಲಾಖೆ ಹಿಂಪಡೆದುಕೊಂಡಿತ್ತು.
ಇನ್ನು ಘಟನೆ ಬಗ್ಗೆ ದಾಯ್ಜಿವಲ್ಡ್ ಜತೆ ಮಾತನಾಡಿದ ನರೇಂದ್ರ ನಾಯಕ್, ಇದರ ಹಿಂದೆ ಯಾರ ಕೈವಾಡವಿದೆಯೆಂದು ತಿಳಿದಿಲ್ಲ. ವಿನಾಯಕ್ ಬಾಳಿಗಾ ಕೊಲೆ ಪ್ರಕರಣದ ಹೋರಾಟ, ಅಕ್ರಮ ಕಟ್ಟಡ, ಮಾನವ ಹಕ್ಕುಗಳ ಹೋರಾಟದ ಸೇರಿದಂತೆ ಅನೇಕ ಹೋರಾಟದಲ್ಲಿ ನಾನು ಮುಂಚೂಣಿಯಲ್ಲಿದ್ದು, ಜನರಲ್ಲಿ ಅಂದವಿಶ್ವಾಸಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನಾನು ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದೇನೆ. ವಿಚಾರವಾದಿಗಳನ್ನು ಹತ್ತಿಕ್ಕಲು ದೇಶದಲ್ಲಿ ಹಲವು ಸಂಘಟನೆಗಳು ಹುಟ್ಟುಕೊಂಡಿದ್ದು, ಸಂಶಯವಿದ್ದ ವ್ಯಕ್ತಿಗಳ ಹೆಸರನ್ನು ನಾನು ಈಗಾಗಲೇ ಪೊಲೀಸರಿಗೆ ನೀಡಿದ್ದೇನೆ ಎಂದು ಹೇಳಿದರು.