ಅಭಿಜಿತ್ ಎನ್ ಕೊಲ್ಪೆ
ಮಂಗಳೂರು, ಡಿ.12 (DaijiworldNews/MB) : ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ, ಸಾರ್ವಜನಿಕರು ಹಲವಾರು ತಿಂಗಳುಗಳ ಕಾಲ ಮನೆಯೊಳಗೆ ಇದ್ದರೂ ಸಹ, ಕಡಲತೀರಗಳಲ್ಲಿ ಸಾಕಷ್ಟು ತ್ಯಾಜ್ಯ ಸಂಗ್ರಹವಾಗಿದ್ದರಿಂದ ಕಡಲತೀರಗಳ ಸ್ಥಿತಿ ಹದಗೆಟ್ಟಿದೆ. ಕಡಲತೀರಗಳ ಕರುಣಾಜನಕ ಸ್ಥಿತಿಯನ್ನು ಗಮನಿಸಿ, ಹಲವಾರು ಸಂಸ್ಥೆಗಳು, ಸಂಘಗಳು ಸಮುದ್ರ ತೀರಗಳನ್ನು ಸ್ವಚ್ಛಗೊಳಿಸುವ ಕ್ರಮ ಕೈಗೊಂಡಿದೆ. ಅದರಂತೆ ''ಕ್ಲೀನ್ ಕಡಲ್'' ತಂಡದ ಸದಸ್ಯರು ಪರಿಸರವನ್ನು ಸ್ವಚ್ಛವಾಗಿಡಲು ಬೀಚ್ ಸ್ವಚ್ಛತಾ ಕಾರ್ಯವನ್ನು ಪ್ರಾರಂಭಿಸಿದ್ದು ಇದು ಜನರ ಆರೋಗ್ಯಕರ ಜೀವನಶೈಲಿಗೆ ಸಹಕಾರಿಯಾಗಿದೆ.




















ಕ್ಲೀನ್ ಕಡಲ್ ತಂಡವು ಕನ್ವತೀರ್ಥ, ಸೋಮೇಶ್ವರ ಮತ್ತು ಉಚ್ಚಿಲ ಕಡಲತೀರಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತಿದೆ. ಅವರ ಈ ಅಭಿಯಾನಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿದೆ. 300 ಕ್ಕೂ ಹೆಚ್ಚು ಚೀಲಗಳಲ್ಲಿ ಪ್ಲಾಸ್ಟಿಕ್, ಚಪ್ಪಲಿ ಮತ್ತು ಗಾಜಿನ ಬಾಟಲಿಗಳನ್ನು ಈ ತಂಡ ಸಂಗ್ರಹಿಸಿದೆ. ಮುಖ್ಯವಾಗಿ ಪ್ರತಿದಿನ ವಾಕಿಂಗ್ಗೆ ಎಂದು ಬರುವ ಸ್ಥಳೀಯರು ಮತ್ತು ಸಾಮಾನ್ಯವಾಗಿ ಬೀಚ್ ನೋಡಲು ಬರುವ ಜನರು ಕೂಡಾ ಈ ಅಭಿಯಾನಕ್ಕೆ ಕೈ ಜೋಡಿಸಿರುವುದು ಈ ಅಭಿಯಾನಕ್ಕೆ ದೊಡ್ಡ ಯಶಸ್ಸನ್ನು ನೀಡಿದೆ.
ಸಾಫ್ಟ್ವೇರ್ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಪವಿತ್ರ ರಾಣಿ, ಕುಂಜತ್ತೂರು ನಿವಾಸಿ ಗುರುರಾಜ್ ಜೊತೆಯಾಗಿ ಅಕ್ಟೋಬರ್ 20 ರಂದು ಕಡಲತೀರಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದರು. ಓಂ ಕೃಷ್ಣನ್, ಜಗದೀಶ್ ವಿ ಕುಲಾಲ್, ಲಕ್ಷ್ಮಣ್, ಸಂದೀಪ್ ಗಟ್ಟಿ, ದಿವಾಕರ್ ಡಿ ಶೆಟ್ಟಿ, ಡೇವಿಡ್, ರಘುನಾಥ್ ಎಸ್ ಆಳ್ವಾ, ಶಶಿಧರ್ ಬೆಂಗರೆ, ದಾಮೋದರ್, ವೈಶಾಕ್, ಅಶೋಕ್ ದೇವಾಡಿಗ, ಸುದಾರಾ ಕುಲಾಲ್, ಅಮೀರ್ ಉಳ್ಳಾಲ್ ಹಾಗೂ ಕ್ಲೀನ್ ಕಡಲ್ ತಂಡದ ಅನೇಕ ಸದಸ್ಯರ ಬೆಂಬಲದಿಂದ ಅವರು 12 ದಿನಗಳ ಸ್ವಚ್ಛತಾ ಅಧಿವೇಶನ ನಡೆಸಿದರು.
ಈ ಬಗ್ಗೆ ಮಾತನಾಡಿದ ಕ್ಲೀನ್ ಕಡಲ್ ತಂಡದ ಸ್ಥಾಪಕಿಯಾದ ಪವಿತ್ರಾ ರಾಣಿ, "ಪ್ರತಿಯೊಬ್ಬರೂ ತಮ್ಮ ಲಿಂಗ, ವಯಸ್ಸು, ಧರ್ಮ, ಜಾತಿ, ಸಮುದಾಯ ಅಥವಾ ಯಾವುದೇ ರಾಜಕೀಯ ಗುಂಪುಗಳು ಅಥವಾ ಯಾವುದೇ ಕ್ಲಬ್ಗಳನ್ನು ಲೆಕ್ಕಿಸದೆ ಕೈಜೋಡಿಸಿದರೆ, ನಾವು ಖಂಡಿತವಾಗಿಯೂ ನಮ್ಮ ನಗರವನ್ನು ಸ್ವಚ್ಛವಾಗಿರಿಸಿಕೊಳ್ಳಬಹುದು. ಇದು ನಮ್ಮ ಸಾಗರಗಳ ಸ್ವಚ್ಛತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ನಾನು ಬಲವಾಗಿ ನಂಬುತ್ತೇನೆ'' ಎಂದರು.
"ಇದು ಬಹಳ ದೀರ್ಘ ಪ್ರಕ್ರಿಯೆ. ಪ್ಲಾಸ್ಟಿಕ್ ಮುಕ್ತ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರತಿಯೊಬ್ಬರಿಂದಲೂ ಹೆಚ್ಚಿನ ಬೆಂಬಲ ಅಗತ್ಯ. ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಿ ಮತ್ತು ಅದಕ್ಕೆ ಪರ್ಯಾಯವನ್ನು ಕಂಡುಕೊಳ್ಳಿ. ಉದಾಹರಣೆಗೆ ನೀರಿನ ಬಾಟಲಿಯನ್ನು ಖರೀದಿಸುವ ಬದಲು, ನೀವು ಒಂದು ಬಾಟಲಿಯಲ್ಲಿ ನೀರು ಇಟ್ಟುಕೊಳ್ಳಿ. ಅಂಗಡಿಗಳಿಗೆ ಬಟ್ಟೆಯ ಚೀಲವನ್ನು ಕೊಂಡೊಯ್ಯಿರಿ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವಾದಷ್ಟು ಪ್ರಯತ್ನಿಸಿ'' ಎಂದು ಮನವಿ ಮಾಡಿದರು.
''ಸರ್ಕಾರ ಪ್ಲಾಸ್ಟಿಕ್ ಅನ್ನು ನಿಷೇಧಿಸಬೇಕು ಮತ್ತು ಪ್ಲಾಸ್ಟಿಕ್ ಬಳಕೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆಗ ನಾವು ಮಂಗಳೂರಿಗರು ತಮ್ಮ ಮನೆ ಮಾತ್ರವಲ್ಲ ಕಡಲತೀರಗಳನ್ನೂ ಸಹ ಸ್ವಚ್ಛವಾಗಿರಿಸುತ್ತಾರೆ ಎಂದು ಹೆಮ್ಮೆಯಿಂದ ಹೇಳಬಹುದಾದ ದಿನವನ್ನು ತಲುಪಬಹುದು'' ಎಂದರು.
''ಪ್ರಕೃತಿ ಪ್ರಿಯರಾದ ನಾವು ಕಡಲತೀರಗಳನ್ನು ಸ್ವಚ್ಛಗೊಳಿಸುವ ಈ ಚಟುವಟಿಕೆಯನ್ನು ಪ್ರಾರಂಭಿಸಿದ್ದೇವೆ. ಜನರಿಗೆ ಅರಿವು ಮೂಡಿಸಲು, ಎಂಆರ್ಪಿಎಲ್ನಲ್ಲಿ ಕೆಲಸ ಮಾಡುವ ಸುಕೇಶ್ ವಿಜಯ್ ಕುಮಾರ್ ಅವರ ಸಹಾಯದಿಂದ ನವೆಂಬರ್ 1 ರಂದು ಕನ್ವತೀರ್ಥ, ಸೋಮೇಶ್ವರ ಮತ್ತು ಉಚ್ಚಿಲ ಕಡಲತೀರಗಳಲ್ಲಿ ಕಿನಾರೆ -2020 ಕಾರ್ಯಕ್ರಮವನ್ನು ನಡೆಸಿದ್ದೇವೆ'' ಎಂದು ಮಾಹಿತಿ ನೀಡಿದರು.
''ಈ ತಂಡವು ಪ್ಲಾಸ್ಟಿಕ್ ಕಸ ಎಸೆಯದಂತೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಪ್ಲಾಸ್ಟಿಕ್ ನಮ್ಮ ಸಮುದ್ರಕ್ಕೆ ಬೇರೆ ಬೇರೆ ರೀತಿಯಲ್ಲಿ ತಲುಪುತ್ತದೆ. ಇದರಿಂದಾಗಿ ಭವಿಷ್ಯದಲ್ಲಿ ಬಹಳಷ್ಟು ಸಮಸ್ಯೆಗಳು ಉಂಟಾಗುತ್ತದೆ. ಈ ಪ್ಲಾಸ್ಟಿಕ್ಗಳನ್ನು ಸೇವಿಸುವುದರಿಂದ ಮರಿ ಮೀನುಗಳು ಸಾಯುತ್ತಿವೆ ಎಂದು ಸಂಶೋಧನೆ ಹೇಳುತ್ತದೆ. ಈ ಕಡಲತೀರಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ತಂಡವು ಮುಂದುವರಿಸುತ್ತದೆ'' ಎಂದು ತಿಳಿಸಿದರು.