ಬೆಳ್ತಂಗಡಿ, ಜೂ15: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಜಿ ಶಾಸಕ ವಸಂತ ಬಂಗೇರ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.
ಚಾರ್ಮಾಡಿ ಘಾಟ್ ಗುಡ್ಡ ಕುಸಿತ ಹಿನ್ನೆಲೆ ವಸಂತ ಬಂಗೇರ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ತನ್ನ ಬೆಂಬಲಿಗರ ಎದುರಿನಲ್ಲಿಯೇ ವಸಂತ ಬಂಗೇರ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಧಿಕಾರಿಗಳನ್ನು ಹೀನಾಯವಾಗಿ ತರಾಟೆಗೆ ತೆಗೆದುಕೊಂಡ ಬಂಗೇರ, ಚಾರ್ಮಾಡಿಯಲ್ಲಿ ಎಲ್ಲಿವರೆಗೆ ನಿಮ್ಮ ರಸ್ತೆ ಬರುತ್ತದೆ. ಅಲ್ಲಿವರೆಗೆ ಚರಂಡಿಗಳನ್ನು ಸರಿಪಡಿಸಿ ನೀರು ಸರಿಯಾಗಿ ಹೋಗುವಂತೆ ಮಾಡಿ. ಇಲ್ಲಿವರೆಗೆ ಈ ರಸ್ತೆಗೆ ಬಂದಿದ್ದೀರಾ? ಎಷ್ಟು ಸಮಯವಾಯ್ತು ಈ ಕಡೆ ಬರದೆ? ಯಾಕೆ ಬರಲಿಲ್ಲ..? ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಮುಂದುವರಿದು ಅಧಿಕಾರಿಗಳ ಜೊತೆ ಮಾತನಾಡಿದ ಅವರು, ನಿಮಗೆ ಮಾನ ಮರ್ಯಾದೆ ಇದೆಯಾ...? ಸಾರ್ವಜನಿಕ ರಸ್ತೆ ಈ ರೀತಿಯಾಗಲು ಕಾರಣ ಯಾರು...? ನಿಮ್ಮ ಇಲಾಖೆ. ಹೀಗಾಗಿ 10 ದಿವಸದೊಳಗೆ ರಸ್ತೆ ಸರಿಪಡಿಸಿ ಕೊಡಿ. ಮಾಡದಿದ್ದರೆ ನಿಮ್ಮನ್ನು ಏನು ಮಾಡಬೇಕೆಂದು ನಮಗೆ ಗೊತ್ತಿದೆ. ನೀವು ನಮ್ಮ ಜಿಲ್ಲೆಯವರು ಅಂತ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನಿಮಗೆ ನಾನು ಗೌರವ ಕೊಡುತ್ತೇನೆ. ಹೀಗಾಗಿ ಗೌರವ ಕೊಟ್ಟಾಗಲೂ ನೀವು ಕೆಲಸ ಮಾಡದಿದ್ದರೆ ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಇದೀಗ ವಸಂತ ಬಂಗೇರ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ.