ಮಂಗಳೂರು, ಡಿ.12 (DaijiworldNews/MB) : ಕೋಟಿ-ಚೆನ್ನಯ ಜನ್ಮಸ್ಥಳ ಕುರಿತು ಬಿಜೆಪಿ ಮುಖಂಡ ಹರಿರಿಕೃಷ್ಣ ಬಂಟ್ವಾಳ ಅವರ ಹೇಳಿಕೆಯನ್ನು ಗೆಜ್ಜೆಗಿರಿ ನಂದನಬಿತ್ತಿಲ್ನ ಮುಖಂಡರು ಖಂಡಿಸಿದ ಕೆಲ ದಿನಗಳ ನಂತರ, ಹರಿಕೃಷ್ಣ ಬಂಟ್ವಾಳ ಅವರು, ಡಿಸೆಂಬರ್ 12 ರ ಶನಿವಾರ, ತುಳುನಾಡ ಕೋಟಿ-ಚೆನ್ನಯರು ಪಡುಮಲೆಯಲ್ಲಿ ಜನಿಸಿದರು, ಗೆಜ್ಜೆಗಿರಿಯಲ್ಲಿ ಅಲ್ಲ ಎಂದು ಮತ್ತೆ ಹೇಳಿದರು.


ನಗರದ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ''ಇತಿಹಾಸವನ್ನು ತಿರುಚುವ ಪ್ರಯತ್ನಗಳು ನಡೆಯುತ್ತಿವೆ. ಇತಿಹಾಸವನ್ನು ಯಾರೂ ನಾಶಮಾಡಲು ಸಾಧ್ಯವಿಲ್ಲ. ಸತ್ಯವು ಕಠಿಣವಾಗಿರುತ್ತದೆ'' ಎಂದರು.
''ಗೆಜ್ಜೆಗಿರಿ ನಂದನಬಿತ್ತಿಲ್ ಅಭಿವೃದ್ಧಿಗಾಗಿ 13 ಕೋಟಿ ರೂ. ಹಣವನ್ನು ಸಮುದಾಯದ ಜನರಿಂದ ಸಂಗ್ರಹಿಸಲಾಗಿದೆ'' ಎಂಬ ಗಂಭೀರ ಆರೋಪವನ್ನು ಮಾಡಿದ ಅವರು, ''ದುರದೃಷ್ಟವಶಾತ್, ಗೆಜ್ಜೆಗಿರಿ ನಂದನ ಬಿತ್ತಿಲ್ನಲ್ಲಿ ಒಂದು ಶೇ. ಭೂಮಿಯನ್ನು ನೋಂದಾಯಿಸಲಾಗಿಲ್ಲ. ಸಂಪೂರ್ಣ ಆಸ್ತಿ ಇಬ್ಬರು ವ್ಯಕ್ತಿಗಳ ಹೆಸರಿನಲ್ಲಿದೆ. ಆದ್ದರಿಂದ, ಈ ವಿಷಯದ ಬಗ್ಗೆ ವಿವರವಾದ ತನಿಖೆ ನಡೆಸಬೇಕೆಂದು ನಾನು ಒತ್ತಾಯಿಸುತ್ತೇನೆ'' ಎಂದು ಹೇಳಿದರು.
''ಅವರ ನಡುವೆ ಆದಾಯದ ವಿವಾದವಿದ್ದು ಅದು ರಕ್ತಪಾತಕ್ಕೆ ಕಾರಣವಾಗುತ್ತದೆ. ದೇವಾಲಯದ ಹೆಸರಿನಲ್ಲಿ ಭೂಮಿಯನ್ನು ನೋಂದಾಯಿಸದೆ, ಅವರು ಹೇಗೆ ಹಣವನ್ನು ಸಂಗ್ರಹಿಸಿದರು? ಹಾಗಾದರೆ ಅವರು ಬಿಲ್ಲವ ಸಮಾಜದ ಜನರಿಗೆ ಮೋಸ ಮಾಡಿದ್ದಾರೆಂದು ಅಲ್ಲವೇ?'' ಎಂದು ಪ್ರಶ್ನಿಸಿದರು.
''ಗೆಜ್ಜೆಗಿರಿ ನಂದನಬಿತ್ತಿಲ್ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಾಗಿದ್ದ ಚಿತ್ತರಂಜನ್, ಸತ್ಯ ತಿಳಿದ ನಂತರ ಹುದ್ದೆಗೆ ರಾಜೀನಾಮೆ ನೀಡಿದರು'' ಎಂದು ಕೂಡಾ ಹರಿಕೃಷ್ಣರವರು ಆರೋಪಿಸಿದರು.
''ಗೆಜ್ಜೆಗಿರಿ ಕೋಟಿ-ಚೆನ್ನಯರ ಜನ್ಮಸ್ಥಳ ಎಂದು ಯಾವುದೇ ಬರಹಗಾರರು ಅಥವಾ ಸ್ವಾತಂತ್ರ್ಯ ಪೂರ್ವದ ಇತಿಹಾಸಕಾರರು ದಾಖಲಿಸಿಲ್ಲ. ಎ ಸಿ ಬರ್ನೆಲ್ ಅವರು ಪುಸ್ತಕ ದಿ ಡೇವಿಲ್ ವರ್ಷಿಪ್ ಆಫ್ ದಿ ತುಳುವಾಸ್ ಎಂಬ ಕೃತಿಯಲ್ಲಿ, ಆಗಸ್ಟ್ ಬಾರ್ಮರ್ನ ಪಾಡ್ದನದಲ್ಲಿ, ಹಾಗೂ ಪಂಜೆ ಮಂಗೇಶ್ ರಾವ್ರ ಕೃತಿಯಲ್ಲಿ ಕೋಟಿ-ಚೆನ್ನಯರು ಪಡುಮಲೆಯಲ್ಲಿ ಜನಿಸಿದ್ದಾರೆ ಎಂದು ಬರೆದಿದ್ದಾರೆ'' ಎಂದು ವಿವರಿಸಿದರು.
"ಈಗ, ಕೆಲವರು ನಾನು ಬಂಟ ಸಮುದಾಯದ ಜನರೊಂದಿಗೆ ಇದ್ದೇನೆ ಎಂದು ಹೇಳುತ್ತಿದ್ದಾರೆ. ಅವರು ಹೇಳಲಿ. ಆದರೆ 280 ಗರೋಡಿಯಲ್ಲಿ ಕೇವಲ 10 ಗರೋಡಿಗಳು ಬಿಲ್ಲವ ಸಮುದಾಯದ ಜನರಿಗೆ ಸೇರಿದ್ದು ಉಳಿದವುಗಳು ಇತರ ವಿವಿಧ ಸಮುದಾಯಗಳ ಭೂಮಿಯಾಗಿದೆ'' ಎಂದರು.
''ಕೋಟಿ-ಚೆನ್ನಯ ಜನ್ಮಸ್ಥಳ ಸಂಚಲನ ಸಮಿತಿ ಟ್ರಸ್ಟ್ನ ಏಕೈಕ ಉದ್ದೇಶವೆಂದರೆ ಕೋಟಿ-ಚೆನ್ನಯ ಹಾಗೂ ದೇವಿಬೈದತಿಯ ಜನ್ಮಸ್ಥಳ ಹಾಗೂ ಮೂಲ ಪಡುಮಲೆ ಎಂಬುದನ್ನು ಕತ್ತಲೆಯಿಂದ ಬೆಳಕಿಗೆ ತರುವುದು. ಕೋಟಿ-ಚೆನ್ನಯರ ಇತಿಹಾಸವನ್ನು ಮುಂದಿನ ಪೀಳಿಗೆಗೆ ಸ್ಮರಣೀಯವಾಗಿರಿಸಬೇಕೆಂಬ ಏಕೈಕ ಉದ್ದೇಶದಿಂದ ನಾವು ಪಡುಮಲೆ ಅಭಿವೃದ್ಧಿಪಡಿಸಲು ಮುಂದೆ ಬಂದಿದ್ದೇವೆ. ಅದರಿಂದಾಗಿ ತುಳುನಾಡು ಧೈರ್ಯಶಾಲಿಗಳಾದ ಕೋಟಿ-ಚೆನ್ನಯರ ಇತಿಹಾಸವು ಇಡೀ ದೇಶಕ್ಕೆ ತಿಳಿಯುತ್ತದೆ'' ಎಂದು ಹೇಳಿದರು.
''ಕೋಟಿ-ಚೆನ್ನಯ್ಯರು ಒಂದೇ ಸಮುದಾಯಕ್ಕೆ ಸೀಮಿತಗೊಳಿಸಲಾಗುವುದಿಲ್ಲ. ಚಲನಚಿತ್ರ ನಟ ವಿನೋದ್ ಆಳ್ವ ಅವರು ಪಡುಮಲೆ ಅಭಿವೃದ್ಧಿಗಾಗಿ ತಮ್ಮ ಭೂಮಿಯನ್ನು ಉಚಿತವಾಗಿ ದಾನ ಮಾಡುತ್ತಿದ್ದಾರೆ'' ಎಂದು ಮಾಹಿತಿ ತಿಳಿಸಿದರು.
''ಸ್ವಾತಂತ್ರ್ಯ ಪೂರ್ವದಲ್ಲಿ ಬರೆದ ಪುಸ್ತಕದ ಮೂಲಕ ಗೆಜ್ಜೆಗಿರಿ ಕೋಟಿ-ಚೆನ್ನಯರ ಜನ್ಮಸ್ಥಳ ಎಂದು ಯಾರಾದರೂ ಸಾಬೀತುಪಡಿಸಿದರೆ ನಾನು ರಾಜೀನಾಮೆ ನೀಡಲು ಸಿದ್ಧ'' ಎಂದರು. ಹಾಗೆಯೇ ''ಗೆಜ್ಜೆಗಿರಿಯನ್ನು ಕೋಟಿ-ಚೆನ್ನಯರ ಜನ್ಮಸ್ಥಳ ಎಂದು ಹೇಳುವವರು ಕೋಟಿಯನ್ನು ಹತ್ಯೆಗೈಯಲು ಸಹಾಯ ಮಾಡಿದ ಚಂದುಗಿಡಿಯ'' ಅನುಯಾಯಿಗಳು ಟೀಕಿಸಿದರು.
ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಳ ಸಂಚಲನ ಸಮಿತಿ ಟ್ರಸ್ಟ್ ಕಚೇರಿಯನ್ನು ಜನವರಿ 14 ರಂದು ಉದ್ಘಾಟಿಸಲಾಗುತ್ತದೆ.